ಆನಂದ್‌ ಸಿಂಗ್ ಪುತ್ರನ ವಿವಾಹದ ಬಗ್ಗೆ ನಿಗಾ ವಹಿಸಲು ಕಾಂಗ್ರೆಸ್ ಆಗ್ರಹ

Update: 2019-11-27 16:57 GMT

ಬಳ್ಳಾರಿ, ನ. 27: ಜಿಲ್ಲೆಯ ವಿಜಯನಗರ(ಹೊಸಪೇಟೆ) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ತಮ್ಮ ಪುತ್ರನ ವಿವಾಹಕ್ಕೆ ಬರುವ ಜನರಿಗೆ ಚಿನ್ನದ ನಾಣ್ಯದ ಉಡುಗೊರೆ ಮೂಲಕ ಆಮಿಷವೊಡ್ಡುವ ಮಾಹಿತಿ ಇದ್ದು, ಈ ಬಗ್ಗೆ ಆಯೋಗಕ್ಕೆ ದೂರು ಸಲ್ಲಿಸಲಾಗುವುದೆಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ತಿಳಿಸಿದ್ದಾರೆ.

ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದಲ್ಲಿ 2.36 ಲಕ್ಷ ಮತದಾರರಿದ್ದು, ಸುಮಾರು 55 ಸಾವಿರ ಕುಟುಂಬಗಳಿಗೆ ಲಕ್ಷ್ಮಿ ಚಿತ್ರದ ಚಿನ್ನದ ನಾಣ್ಯ ನೀಡುತ್ತಿದ್ದಾರೆಂದು ಗೊತ್ತಾಗಿದೆ. ಇದು ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರಿದರು.

ಆನಂದ್ ಸಿಂಗ್ ಅವರು ತಮ್ಮ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ಆದರೆ, ಉಪಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಅಥವಾ ಮತದಾರರಿಗೆ ಊಟೋಪಚಾರ ವ್ಯವಸ್ಥೆ ಮೇಲೆ ಚುನಾವಣೆ ಆಯೋಗ ನಿಗಾ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಆನಂದ್ ಸಿಂಗ್ ತಮ್ಮ ಪುತ್ರನ ವಿವಾಹಕ್ಕೆ 2 ಕೋಟಿ ರೂ.ವೆಚ್ಚದ ಶಾಮಿಯಾನ ಹಾಗೂ ಅಷ್ಟೇ ವೆಚ್ಚದಲ್ಲಿ ಊಟೋಪಚಾರ ವ್ಯವಸ್ಥೆ ಮಾಡಿದ್ದಾರೆ. ಅಲ್ಲದೆ, ನಾಣ್ಯಗಳ ಉಡುಗೊರೆ ನೀಡುತ್ತಿದ್ದಾರೆ. ಹೀಗಾಗಿ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ರಾಯರೆಡ್ಡಿ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News