ಮೂರು ಪ್ರತ್ಯೇಕ ರಸ್ತೆ ಅಪಘಾತ: ಓರ್ವ ಮೃತ್ಯು, ಆರು ಮಂದಿಗೆ ಗಾಯ
ಶಿವಮೊಗ್ಗ, ನ. 27: ಜಿಲ್ಲೆಯ ಹೊಸನಗರ ಹಾಗೂ ಸೊರಬ ತಾಲೂಕುಗಳಲ್ಲಿ ನಡೆದ ಮೂರು ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ಓರ್ವ ಮೃತಪಟ್ಟು, ಆರು ಜನ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಹೊಸನಗರ ವರದಿ: ತಾಲೂಕಿನ ಬಾಳೂರು ಗ್ರಾಮದ ಎಂಸಿಐ ಗೋಡಂಬಿ ಕಾರ್ಖಾನೆ ಸಮೀಪ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ, ಸವಾರ ತಮಡಿಕೊಪ್ಪ ಗ್ರಾಮದ ನಿವಾಸಿ ರಾಘವೇಂದ್ರ (40) ಎಂಬುವರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಹೊಸದಾಗಿ ಖರೀದಿಸಿದ್ದ ಬೈಕ್ ನೊಂದಣಿಗೆಂದು ಸಾಗರಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಈ ಸಂಬಂಧ ರಿಪ್ಪನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಘಟನೆಯಲ್ಲಿ, ತಾಲೂಕಿನ ರಾಮಚಂದ್ರಾಪುರ ಗ್ರಾಮದ ಬಳಿ ಚಾಲನೆಯ ನಿಯಂತ್ರಣ ಕಳೆದುಕೊಂಡ ಕಾರೊಂದು, ರಸ್ತೆ ಬದಿಯ ಸೇತುವೆ ಮೇಲಿಂದ ಹಳ್ಳಕ್ಕೆ ಬಿದ್ದಿದೆ. ಇದರಿಂದ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೊರಬ ವರದಿ: ಕಾರು ಢಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ತೆರಳುತ್ತಿದ್ದ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಆನವಟ್ಟಿ ಸಮೀಪದ ನೃಪತುಂಗ ಶಾಲೆಯ ಸಮೀಪ ನಡೆದಿದೆ. ಗಾಯಾಳುಗಳು ಹಿರೇಮಾಗಡಿ ಗ್ರಾಮದವರೆಂದು ಗುರುತಿಸಲಾಗಿದೆ. ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.