'ಅನರ್ಹರ ಠೇವಣಿ ಕಳೆಯಲಿ, ಮತದಾರರ ಮಾನ ಉಳಿಯಲಿ': ದೇವನೂರು ಮಹಾದೇವ

Update: 2019-11-27 18:19 GMT

ಮೈಸೂರು,ನ.27: ಅನರ್ಹ ಶಾಸಕರಿಗೆ ಠೇವಣಿಯೂ ಸಿಗದಂತೆ ಮಾಡಿ ಮತದಾರರು ತಮ್ಮ ಮಾನ ಮರ್ಯಾದೆ ಕಾಪಾಡಿಕೊಳ್ಳಬೇಕಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಉನ್ನತ ಮಟ್ಟದ ಸಮಿತಿ ಸದಸ್ಯ ದೇವನೂರು ಮಹಾದೇವ್ ರಾಜ್ಯದ ಮತದಾರರಲ್ಲಿ ಮನವಿ ಮಾಡಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಚುನಾವಣೆಯಲ್ಲಿ “ಅನರ್ಹರ ಠೇವಣಿ ಕಳೆಯಲಿ. ಮತದಾರರ ಮಾನ ಉಳಿಯಲಿ” ಎಂಬ ಘೋಷಣೆಯನ್ನು ಹೇಳಿದರು.

ನಾವೀಗ ಗಂಭೀರವಾಗಿ ಚಿಂತಿಸಬೇಕಿದೆ. ಯಾಕೆಂದರೆ ಅನರ್ಹ ಶಾಸಕರು ತಮ್ಮನ್ನಷ್ಟೇ ಮಾರಿಕೊಂಡಿಲ್ಲ, ತಾವು ಶಾಸಕರಾಗಲು ಕಾರಣರಾದ ಮತದಾರರನ್ನೆ ಮಾರಿಬಿಟ್ಟಿದ್ದಾರೆ. ರಾಜಕಾರಣ, ಜನತಂತ್ರ ವ್ಯವಸ್ಥೆಯನ್ನೇ ಗಲೀಜು ಮಾಡಿದ ಈ ಕುಬ್ಜ ರಾಜಕಾರಣಿಗಳು ಮತ್ತೆ ಚುನಾವಣೆಗೆ ಸ್ಪರ್ಧಿಸಿ ಮತದಾರರ ಮುಂದೆ ಮತ ಯಾಚಿಸುತ್ತಿದ್ದಾರೆ. ಇದನ್ನು ಧೈರ್ಯ ಅನ್ನಬೇಕೊ, ಭಂಡತನ ಅನ್ನಬೇಕೋ, ಅಥವ ನಿರ್ಲಜ್ಜ ಅನ್ನಬೇಕೋ ತಿಳಿಯದಾಗಿದೆ. ಒಟ್ಟಿನಲ್ಲಿ ರಾಜಕಾರಣಿಗಳಿಗೆ ಚೆಲ್ಲಾಟ, ಪ್ರಜೆಗಳಿಗೆ ಪ್ರಾಣ ಸಂಕಟ ಎಂಬಂತಾಗಿದೆ ಎಂದು ಹೇಳಿದರು.

ಈ ಬಿಕರಿ ಶಾಸಕರಿಂದಾಗಿ ಕರ್ನಾಟಕದಲ್ಲಿ ಉಪಚುನಾವಣೆ ನಮ್ಮ ಮುಂದಿದೆ. ಈ ಬಿಕರಿ  ಶಾಸಕರಿಗೆ “ದ್ರೋಹಿ ಅನ್ನುತ್ತಾರೆ, ನಮಾಕ್ ಹರಾಮ್ ಅನ್ನುತ್ತಾರೆ, ನಮ್ಮ ಹಳ್ಳಿ ಕಡೆ ಒಂದು ಬೈಗುಳ ಇದೆ ಅದು ನನಗೆ ಗೊತ್ತಿಲ್ಲ ಅಂತಲ್ಲ, ಗೊತ್ತಿದೆ. ಆದರೆ ಅದನ್ನು ಹೇಳಲು ಮನಸ್ಸಾಗುತ್ತಿಲ್ಲ ಎಂದು ಹೇಳಿದರು.

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಘಡ್ನವಿಸ್ ಹೇಳಿಕೆ ನೋಡಿದರೆ, ಶಾಸಕರನನ್ನು ಖರೀದಿ ಮಾಡದೆ ಇರಲು ಮೊದಲೆ ನಿರ್ಧರಿಸಿದ್ದೆವು. ಎನ್‍ಸಿಪಿ ಬೆಂಬಲ ಪಡೆದು ಸರ್ಕಾರ ರಚಿಸಿದೆವು. ಆಮೇಲೆ ಅಜಿತ್ ಪವಾರ್ ಬೆಂಬಲ ನೀಡಲಿಲ್ಲ. ಘಡ್ನವಿಸ್ ಸರ್ಕಾರ ರಚಿಸಲು ಆಗಲಿಲ್ಲ” ಇದರ ಅರ್ಥ ಶಾಸಕರು ಖರೀದಿ ವಸ್ತುಗಳು. ಇಂತಹ ಕೃತ್ಯ ಎಸಗುವುದನ್ನು ಅನೈತಿಕ ಎನ್ನುತ್ತಾರೆ. ದುಷ್ಟ ಎನ್ನುತ್ತಾರೆ. ಮನೆಹಾಳ ಅನ್ನುತಾರೆ. ಇನ್ನೂ ಏನೇನೋ ಅನ್ನುತ್ತಾರೆ. ದೇಶವನ್ನು ಆಳ್ವಿಕೆ ನಡೆಸುತ್ತಿರುವ ಪಕ್ಷವೇ ಇಂದು ಇಂತಹ ಕೃತ್ಯಗಳನ್ನು ನಡೆಸುತ್ತಿದೆ. ಇಂಥವರ ಕೈಗೆ ದೇಶ ಕೊಟ್ಟರೆ ಆ ದೇಶವನ್ನು ದೇವರೂ ಕಾಪಾಡಲಾರನೇನೋ. ಅಂಥ ಪರಿಸ್ಥಿತಿ ಇಂದು ಭಾರತದ ಪ್ರಜೆಗಳಿಗೆ ವಕ್ಕರಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕದ ಹಿನ್ನಲೆಯಲ್ಲಿ ಘಡ್ನವಿಸ್ ಅವರ ಮಾತುಗಳನ್ನು ನೋಡುವುದಾದರೆ, ಏನರ್ಥ ಬರುತ್ತದೆ ? ಕರ್ನಾಟಕದಲ್ಲಿ ಶಾಸಕರನ್ನು ಖರೀದಿ ಮಾಡಿದರು, ಬಿಜೆಪಿ ಸರ್ಕಾರ ಬಂತು ಅಂತ ಅರ್ಥ ತಾನೆ ? ಇದು ಘಡ್ನವಿಸ್ ಮಹಾಶಯರಿಗೆ ಚೆನ್ನಾಗಿ ಗೊತ್ತು. ಕರ್ನಾಟಕ ಶಾಸಕನನ್ನು ಕಾಯ್ದುಕೊಂಡಿದ್ದು ಈತನೇ ತಾನೆ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಧ್ಯಕ್ಷ ಚಾಮರಸಮಾಲಿ ಪಾಟೀಲ್, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಬಡಗಲಪುರ ನಾಗೇಂದ್ರ, ಶಬ್ಬೀರ್ ಮುಸ್ತಫ, ಅಭಿರುಚಿ ಗಣೇಶ್, ಎಚ್.ಕೆ.ನಂಜುಂಡಸ್ವಾಮಿ, ವಕೀಲ ಹಾಗೂ ರಾಜ್ಯ ಸಮಿತಿ ಸದಸ್ಯ ಪುನೀತ್, ಲತಾ ಶಂಕರ್, ಕಾವೇರಮ್ಮ, ರಶ್ಮಿ ಮುನಿಕೆಂಪಣ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News