ಚಿಕ್ಕಮಗಳೂರು: ಹಳ್ಳಕ್ಕೆ ಉರುಳಿಬಿದ್ದ ಖಾಸಗಿ ಸಾರಿಗೆ ಬಸ್; ನಾಲ್ವರು ಗಂಭೀರ

Update: 2019-11-28 14:41 GMT

ಚಿಕ್ಕಮಗಳೂರು, ನ.28: ಎದುರಿನಿಂದ ಬಂದ ಸರಕಾರಿ ಬಸ್‍ಗೆ ದಾರಿ ಬಿಡುವ ಸಂದರ್ಭದಲ್ಲಿ ಖಾಸಗಿ ಸಾರಿಗೆ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಉರುಳಿ ಬಿದ್ದ ಘಟನೆ ಗುರುವಾರ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪಟ್ಟಣದ ಸಮೀಪದಲ್ಲಿ ವರದಿಯಾಗಿದ್ದು, ಘಟನೆಯಲ್ಲಿ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಉಳಿದ 21 ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುರುವಾರ ಬೆಳಗ್ಗೆ ತರೀಕೆರೆ ತಾಲೂಕಿನ ದೂಪದಖಾನ್ ಗ್ರಾಮದಿಂದ ತರೀಕೆರೆಗೆ ಹೊರಟಿದ್ದ ಮೂಕಾಂಬಿಕಾ ಎಂಬ ಹೆಸರಿನ ಖಾಸಗಿ ಬಸ್ ತಾಲೂಕಿನ ಲಿಂಗದಹಳ್ಳಿ ಹಾಗೂ ಕೃಷ್ಣಾಪುರ ಗ್ರಾಮಗಳ ನಡುವೆ ಇರುವ ಸಣ್ಣ ಸೇತುವೆ ಬಳಿ ಸಂಚರಿಸುತ್ತಿದ್ದಾಗ ಎದುರಿನಿಂದ ವೇಗವಾಗಿ ಬರುತ್ತಿದ್ದ ಸರಕಾರಿ ಸಾರಿಗೆ ಬಸ್‍ಗೆ ದಾರಿ ಬಿಡುವ ವೇಳೆ ಪಲ್ಟಿಯಾಗಿದೆ. ಖಾಸಗಿ ಬಸ್‍ನ ಚಾಲಕ ಬಸ್‍ ಅನ್ನು ಕೊಂಚ ಬದಿಗೆ ಸರಿಸಲು ಪ್ರಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡ ಬಸ್ ಸೇತುವೆಯಿಂದ ಹಳ್ಳಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದಾಗಿ ಬಸ್‍ನಲ್ಲಿದ್ದ ಪ್ರಯಾಣಿಕರ ಪೈಕಿ ನಾಲ್ವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರೆ, 21 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದುಬಂದಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಲಿಂಗದಹಳ್ಳಿ ಗ್ರಾಮದ ನೂರಾರು ಸಾರ್ವಜನಿಕರು ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಬಸ್‍ನಲ್ಲಿದ್ದ ಪ್ರಯಾಣಿಕರನ್ನು ಹೊರ ಕರೆತಂದು ತರೀಕೆರೆ ಆಸ್ಪತ್ರೆಗೆ ಸಾಗಲು ನೆರವಾಗಿದ್ದಾರೆಂದು ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡ ನಾಲ್ವರು ಪ್ರಯಾಣಿಕರನ್ನು ತರೀಕೆರೆ ತಾಲೂಕು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ 21 ಪ್ರಯಾಣಿಕರನ್ನು ಚಿಕಿತ್ಸೆಗಾಗಿ ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. 

ಘಟನೆ ಸಂಬಂಧ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಸಗಿ ಬಸ್ ಅತೀ ವೇಗದಲ್ಲಿ ಸಂಚರಿಸುತ್ತಿದ್ದುದೇ ಅಪಘಾತಕ್ಕೆ ಕಾರಣ ಎಂದು ತಿಳಿದು ಬಂದಿದೆ. ತರೀಕೆರೆ ತಾಲೂಕಿನ ಸಿರಿಗೆರೆ ಮಠದ ಪೀಠಾಧೀಶ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ತರೀಕೆರೆ ಶಾಸಕ ಡಿ.ಎಸ್.ಸುರೇಶ್, ಜಿ.ಪಂ. ಸದಸ್ಯ ಆನಂದಪ್ಪ ಮತ್ತಿತರರು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ವಿಚಾರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News