ಸಿಎಂ ಯಡಿಯೂರಪ್ಪ ವಿರುದ್ಧ ಐದು ದೂರು ದಾಖಲು
ಬೆಳಗಾವಿ, ನ.28: ಉಪ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಬೆಳಗಾವಿ ಜಿಲ್ಲೆಯ ಗೋಕಾಕ್, ಅಥಣಿ ಹಾಗೂ ಕಾಗವಾಡ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಒಟ್ಟು ಐದು ದೂರುಗಳು ದಾಖಲಾಗಿವೆ.
ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ಹಾಗೂ ಗೋಕಾಕ್‌ನಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ‘ವೀರಶೈವ’ ಸಮಾಜದ ಹೆಸರು ಬಳಕೆ ಮಾಡಿ ಮತಯಾಚಿಸಿರುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಅದೇ ರೀತಿ ಗೋಕಾಕ್ ಮತಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಶೋಕ್ ಪೂಜಾರಿ, ಖಾವಿ ಬಟ್ಟೆ ಧರಿಸಿ ವೀರಶೈವ ಲಿಂಗಾಯತ ಸಮಾಜದ ಸಂಕೇತವಾಗಿರುವ ಜೋಳಿಗೆಯನ್ನು ಹಾಕಿಕೊಂಡು ಸಮಾಜದ ಜನರಿಂದ ಹಣ ಮತ್ತು ಮತಗಳನ್ನು ಯಾಚನೆ ಮಾಡಿರುವುದರ ವಿರುದ್ಧವು ದೂರು ದಾಖಲಾಗಿದೆ.
ಅಥಣಿಯ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವ ಮಹೇಶ್ ಕುಮಟಳ್ಳಿ ನಿವಾಸದಲ್ಲಿ ಕಾರ್ಯಕರ್ತರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂಬ ಮಾಧ್ಯಮಗಳ ವರದಿಯನ್ನು ಆಧರಿಸಿ ಪ್ರತ್ಯೇಕ ಪ್ರಕರಣವನ್ನು ದಾಖಲಿಸಲಾಗಿದೆ.
ಕಾಗವಾಡ ಮತ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್ ಅನುಮತಿ ಪಡೆಯದೇ ಖಿಳೇಗಾಂವದಲ್ಲಿ ಚುನಾವಣಾ ಪ್ರಚಾರ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರು ದಾಖಲಾಗಿದೆ.