ಸರಕಾರಿ ಶಾಲಾ ಶಿಕ್ಷಕರ ವೇತನ ವಿಳಂಬ !
ಬೆಂಗಳೂರು, ನ.28 : ರಾಜ್ಯದ ಕೆಲವೆಡೆ ಸರಕಾರಿ ಶಾಲಾ ಶಿಕ್ಷಕರಿಗೆ ಮೂರು ತಿಂಗಳಿನಿಂದ ಸಂಬಳ ನೀಡಿಲ್ಲ, ಇದರಿಂದ ಅವರು ಸಾಲ ಮಾಡಿ ಜೀವನ ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಎಲ್ಲ ಕಡೆ ಇಂತಹ ಸ್ಥಿತಿ ಇಲ್ಲ, ಕೆಲವು ಕಡೆಗಳಲ್ಲಿ ಅಕ್ಟೋಬರ್ ತಿಂಗಳ ಸಂಬಳ ಇದುವರೆಗೂ ಆಗಿಲ್ಲ. ಬೆಂಗಳೂರು ದಕ್ಷಿಣದ ಮೂರು ಬ್ಲಾಕ್‌ಗಳಲ್ಲಿ ಮಾತ್ರ ಕೆಲವು ಅಧಿಕಾರಿಗಳ ಬೇಜವಾಬ್ದಾರಿಯಿಂದ ಪ್ರತಿ ಬಾರಿಯೂ ಸಂಬಳ ವಿಳಂಬವಾಗುತ್ತಿದೆ ಎಂದು ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣಸ್ವಾಮಿ ಹೇಳಿದ್ದಾರೆ.
ಸಂಬಳ ನಿಧಿಯನ್ನು ಖಜಾನಾ 1ರಿಂದ ಖಜಾನಾ 2ಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಈ ವಿಳಂಬ ಆಗುತ್ತಿರಬಹುದು, ಇದರ ಬಗ್ಗೆ ನನಗೂ ಹಲವಾರು ದೂರುಗಳು ಬಂದಿವೆ. ಏನೇ ತಾಂತ್ರಿಕ ಕಾರಣಗಳಿದ್ದರೂ ಶಿಕ್ಷಕರ ವೇತನವನ್ನು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಲೇಬೇಕು ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ್ ಪ್ರತಿಕ್ರಿಯಿಸಿದರು.
ಸರ್ವ ಶಿಕ್ಷಣ ಅಭಿಯಾನ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆಯ ಶಿಕ್ಷಕರಿಗೆ ಈ ಸಮಸ್ಯೆ ಸಾಮಾನ್ಯವಾಗಿತ್ತು, ಇದೀಗ ಇಲಾಖೆಯಿಂದ ನೇರ ನೇಮಕಾತಿ ಆದವರಿಗೂ ಈ ಸಮಸ್ಯೆ ಕಾಡತೊಡಗಿದೆ ಎಂದು ಅವರು ಹೇಳಿದರು.
ವೇತನ ನಿಧಿಗಳ ಬಿಡುಗಡೆಗೆ ಅನುಮತಿ ಸಿಗುವುದು ತಡವಾಗಿರುವ ಕಾರಣ ಹೀಗಾಗಿದೆ. ಜಿಲ್ಲೆಗಳಿಂದ ಕಳುಹಿಸುವ ವೇತನ ಅಂದಾಜಿಗೆ ಮೂರು ತಿಂಗಳ ಮೊದಲೇ ಲೇಖಾನುದಾನ ಪಡೆಯಬೇಕು. ಕೆಲವೊಮ್ಮೆ ಜಿಲ್ಲೆಗಳಿಂದ ತಪ್ಪು ಅಂದಾಜು ಕಳುಹಿಸಿರುತ್ತಾರೆ. ಇದರಿಂದ ಸಂಬಳ ವಿತರಣೆ ವಿಳಂಬವಾಗುತ್ತದೆ ಎಂದು ಅಧಿಕಾರಿಯೊಬ್ಬರು ಸಮಜಾಯಿಷಿ ನೀಡಿದ್ದಾರೆ.