30 ಕೋಟಿ ರೂ. ..: ಅನರ್ಹ ಶಾಸಕರ ಬಗ್ಗೆ ಸಿದ್ದರಾಮಯ್ಯ ಹೊಸ ಬಾಂಬ್
ಬಳ್ಳಾರಿ, ನ.28: ವಿಜಯನಗರ(ಹೊಸಪೇಟೆ) ಕ್ಷೇತ್ರದ ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅಕ್ರಮ ಗಣಿಗಾರಿಕೆಯಿಂದ ಸಂಪಾದಿಸಿರುವ ತಮ್ಮ ಅಕ್ರಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಗುರುವಾರ ವಿಜಯನಗರ ಕ್ಷೇತ್ರದ ಕಮಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪರವಾಗಿ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಆನಂದ್ ಸಿಂಗ್ ತನ್ನ ಅಕ್ರಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ರಾಜಕೀಯದಲ್ಲಿದ್ದಾರೆಯೇ ಹೊರತು, ಜನಸೇವೆಗಾಗಿ ಅಲ್ಲ. ಇಂತಹ ವ್ಯಕ್ತಿಯನ್ನು ಗೆಲ್ಲಿಸಿದರೆ ಯಾರಿಗೂ ಪ್ರಯೋಜನವಿಲ್ಲ. ಅವರೊಬ್ಬ ಜಮೀನ್ದಾರಿ ಮನಃಸ್ಥಿತಿಯ, ಜನಸಾಮಾನ್ಯರ ರಕ್ತ ಹೀರುವ ವ್ಯಕ್ತಿ ಎಂದು ಅವರು ಕಿಡಿಗಾರಿದರು.
ವಿಜಯನಗರ ವಿಧಾನಸಭಾ ಕ್ಷೇತ್ರದಿಂದ ಮೂರು ಸಲ ಚುನಾಯಿತರಾದರೂ ಆನಂದ್ ಸಿಂಗ್, ಈ ಕ್ಷೇತ್ರದ ಅಭಿವೃದ್ಧಿಗೆ ಏನೂ ಮಾಡಿಲ್ಲ. ಇಂತಹ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಏನು ಪ್ರಯೋಜನ. ಈ ಬಾರಿಯ ಚುನಾವಣೆಯು ಪ್ರಾಮಾಣಿಕ ಹಾಗೂ ಅಪ್ರಾಮಾಣಿಕರ ನಡುವಿನ ಹೋರಾಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಪ್ರಾಮಾಣಿಕರಾಗಿದ್ದು, ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಅಪ್ರಾಮಾಣಿಕರಾಗಿದ್ದಾರೆ. ಅಕ್ರಮ ಗಣಿಗಾರಿಕೆಯ ಹಣದ ಮದದಲ್ಲಿ ಮೆರೆಯುತ್ತಿರುವ ಆನಂದ್ ಸಿಂಗ್ ಯಾವುದೇ ಕಾರಣಕ್ಕೂ ಗೆಲ್ಲಬಾರದು ಎಂದು ಸಿದ್ದರಾಮಯ್ಯ ಹೇಳಿದರು.
'ನಾನು ಜೈಲಿಗೆ ಹೋಗಿ ಬಂದಿದ್ದು, ನನ್ನ ವಿರುದ್ಧದ ಎಲ್ಲ ಪ್ರಕರಣಗಳು ಮುಕ್ತಾಯಗೊಳ್ಳುತ್ತಿವೆ. ಇನ್ನು ಮುಂದೆ ಯಾವುದೇ ತಪ್ಪು ಮಾಡುವುದಿಲ್ಲ' ಎಂಬ ಮಾತು ಕೊಟ್ಟು ಬಿಜೆಪಿಯಿಂದ ಬಂದಿದ್ದ ಆನಂದ್ ಸಿಂಗ್, ಅಧಿಕಾರದ ಆಸೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಏಕಾಏಕಿ ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂದು ಸಿದ್ದರಾಮಯ್ಯ ಕಿಡಿಗಾರಿದರು.
ಕಾಂಗ್ರೆಸ್ ಪಕ್ಷ ಹಾಗೂ ಕ್ಷೇತ್ರದ ಮತದಾರರಿಗೆ ಮೋಸ ಮಾಡಿರುವ ಆನಂದ್ ಸಿಂಗ್‌ಗೆ ಈ ಉಪ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಬೇಕು. ಸುಪ್ರೀಂಕೋರ್ಟ್ ಅವರನ್ನು ಅನರ್ಹಗೊಳಿಸಿದೆ. ಜನತಾ ನ್ಯಾಯಾಲಯದಲ್ಲಿ ಅವರು ಶಾಶ್ವತವಾಗಿ ತಿರಸ್ಕೃತಗೊಳ್ಳಬೇಕು ಎಂದು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಉಪ ಚುನಾವಣೆ ನಡೆಯುತ್ತಿರುವ ಅನರ್ಹ ಶಾಸಕರ ಕ್ಷೇತ್ರದಲ್ಲಿ ಜನಾಕ್ರೋಶವಿದೆ. ಅನರ್ಹ ಶಾಸಕರು ತಲಾ 30 ಕೋಟಿ ರೂ.ಗಳಿಗೆ ತಮ್ಮನ್ನು ಮಾರಾಟ ಮಾಡಿಕೊಂಡಿದ್ದಾರೆ. ಹಣ, ಅಧಿಕಾರದ ಆಸೆಗಾಗಿ ತಮ್ಮನ್ನು ಮಾರಿಕೊಂಡಿರುವ ಈ ಅನರ್ಹರನ್ನು ಸೋಲಿಸುವ ಮೂಲಕ ಇಡೀ ದೇಶಕ್ಕೆ ರಾಜ್ಯದ ಮತದಾರರು ಸ್ಪಷ್ಟ ಸಂದೇಶವನ್ನು ರವಾನಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಸಂತೆ, ಜಾತ್ರೆಗಳಲ್ಲಿ ಕುರಿ, ಮೇಕೆಗಳನ್ನು ಖರೀದಿಸುವುದನ್ನು ನಾವು ನೋಡಿದ್ದೇವೆ. ಆದರೆ, ಬಿಜೆಪಿಯವರು ಮಾನ ಮರ್ಯಾದೆ ಇಲ್ಲದೆ, ಜನರ ಮತಗಳಿಂದ ಗೆದ್ದು ಬಂದಿರುವ ಶಾಸಕರನ್ನು ಪ್ರಾಣಿಗಳಂತೆ ಹಣ ಕೊಟ್ಟು ಖರೀದಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಕನಿಷ್ಠ 12 ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸುವುದು ನಿಶ್ಚಿತ. ಯಾವುದೇ ಕಾರಣಕ್ಕೂ ಅನರ್ಹ ಶಾಸಕರು ಯಾವುದೇ ಕ್ಷೇತ್ರದಲ್ಲಿ ಗೆಲುವು ಸಾಧಿಸಬಾರದು. ಆ ಮೂಲಕ ಮತದಾರರು ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವ ಬಸವರಾಜರಾಯರಡ್ಡಿ, ಶಾಸಕರಾದ ಪಿ.ಟಿ.ಪರಮೇಶ್ವರ್ ನಾಯ್ಕಿ, ಜೆ.ಎನ್.ಗಣೇಶ್, ಭೀಮಾ ನಾಯ್ಕಿ, ಈ.ತುಕಾರಾಂ, ರಘುಮೂರ್ತಿ, ವಿಧಾನಪರಿಷತ್ ಸದಸ್ಯರಾದ ಬೋಸರಾಜು, ಅಲ್ಲಂ ವೀರಭದ್ರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.