ಇನ್ನು ಪಿಯು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚುವರಿ ಹಾಳೆ ಇಲ್ಲ !
ಬೆಂಗಳೂರು, ನ.28: ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತಿಮ ಪರೀಕ್ಷೆಯಲ್ಲಿ ಹೆಚ್ಚುವರಿ ಹಾಳೆಗಳನ್ನು ನೀಡುವುದರ ಬದಲಿಗೆ, 42 ಪುಟಗಳಿರುವ ಬುಕ್‌ಲೆಟ್ ನೀಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಮೌಲ್ಯಮಾಪನದ ವೇಳೆ ಉಪನ್ಯಾಸಕರಿಗೆ ಹೊರೆ ತಪ್ಪಿಸಲು ಹಾಗೂ ಗೊಂದಲಗಳಿಗೆ ಆಸ್ಪದವಿಲ್ಲದಂತೆ ಮಾಡುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. 2020 ಮಾರ್ಚ್‌ನಲ್ಲಿ ನಡೆಯಲಿರುವ ಪರೀಕ್ಷೆ ವೇಳೆ ಈ ಹೊಸ ತಿದ್ದುಪಡಿ ನಿಯಮ ಅನುಷ್ಠಾನಕ್ಕೆ ಬರಲಿದೆ.
ಈ ಹಿಂದೆ ಪಿಯುಸಿ ಅಂತಿಮ ಪರೀಕ್ಷೆಯ ಸಂದರ್ಭದಲ್ಲಿ 14 ಪುಟಗಳಿರುವ ಉತ್ತರ ಪತ್ರಿಕೆ ನೀಡಲಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಅದನ್ನು 22 ಪುಟಗಳಿಗೆ ಏರಿಸಲಾಗುತ್ತು. ಅಲ್ಲದೆ, ಹೆಚ್ಚುವರಿ ಅಗತ್ಯವಿದ್ದಲ್ಲಿ, ಹೆಚ್ಚಿನ ಶೀಟ್‌ಗಳನ್ನು ನೀಡಲಾಗುತ್ತಿತ್ತು. ಹೆಚ್ಚುವರಿಯಾಗಿ ಬರೆದ ಉತ್ತರ ಪತ್ರಿಕೆಯ ಮೌಲ್ಯಮಾಪನಕ್ಕೆ ಉಪನ್ಯಾಸಕರಿಗೆ ಹೊರೆಯಾಗುತ್ತಿತ್ತು.
ಅಲ್ಲದೆ, ಪರೀಕ್ಷಾ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸುವ ಮೇಲ್ಪಿಚಾರಕರು ಹೆಚ್ಚುವರಿ ಉತ್ತರ ಪತ್ರಿಕೆ ತೆಗೆದುಕೊಂಡವರಿಗೆ ಬುಕ್‌ಲೆಟ್ ಸಂಖ್ಯೆ, ನೋಂದಣಿ ಸಂಖ್ಯೆ ಬರೆಯುವಂತೆ ತಿಳಿಸಿ, ಡೈರಿಯಲ್ಲಿ ಸಹಿ ಪಡೆಯಬೇಕಿತ್ತು. ಇದರಿಂದ ಕೊಠಡಿಯಲ್ಲಿನ ಇತರೆ ವಿದ್ಯಾರ್ಥಿಗಳಿಗೂ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಇಲಾಖೆ ಉತ್ತರ ಪತ್ರಿಕೆ ಬದಲಿಸಲು ಮುಂದಾಗಿದೆ.
ಗೊಂದಲಗಳಿಗೆ ತೆರೆ:
ಪರೀಕ್ಷೆಯಲ್ಲಿ ಹೆಚ್ಚುವರಿ ಉತ್ತರ ಪತ್ರಿಕೆಗಳು ಸಾಕಷ್ಟು ಗೊಂದಲಗಳನ್ನು ಸೃಷ್ಟಿಸುತ್ತಿತ್ತು. ಕೆಲವೊಂದು ಬಾರಿ ಉತ್ತರ ಪತ್ರಿಕೆಗಳು ಕಳೆದು ಹೋಗುವುದು, ಮೊದಲ ಉತ್ತರ ಪತ್ರಿಕೆಯಲ್ಲಿ ಬರದ ಅಕ್ಷರಕ್ಕೂ, ಹೆಚ್ಚುವರಿ ಉತ್ತರ ಪತ್ರಿಕೆಯಲ್ಲಿ ಬರದ ಅಕ್ಷರಕ್ಕೂ ವ್ಯತ್ಯಾಸ ಕಾಣುವುದು ಅನುಮಾನಕ್ಕೆ ದಾರಿ ಮಾಡಿಕೊಡುತ್ತಿದ್ದವು. ಅಲ್ಲದೆ, ಹೆಚ್ಚುವರಿ ಉತ್ತರ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ನಮೂದಿಸದೇ ಇರುವುದು ಸಾಕಷ್ಟು ಗೊಂದಲಗಳಿಗೆ ಕಾರಣವಾಗುತ್ತಿತ್ತು. ಅದರಲ್ಲಿಯೂ ವಿಜ್ಞಾನ ವಿಷಯದ ವಿದ್ಯಾರ್ಥಿಗಳು ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ ವೇಳೆ ಅವರು ಪಡೆದಿದ್ದ ಹೆಚ್ಚುವರಿ ಪ್ರಶ್ನೆ ಪತ್ರಿಕೆಗಳು ಸಿಗುತ್ತಿರಲಿಲ್ಲ. ಇದೀಗ ಎಲ್ಲ ಗೊಂದಲಗಳಿಗೂ ತೆರೆ ಎಳೆಯಲು ಮುಂದಾಗಿದ್ದು, 42 ಪುಟಗಳಿರುವ ಬುಕ್‌ಲೆಟ್ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿರೋಧ: ಪರೀಕ್ಷಾ ಶುಲ್ಕ ಪಾವತಿಸಿದ ನಂತರ ವಿದ್ಯಾರ್ಥಿಗಳು ಹೆಚ್ಚುವರಿ ಉತ್ತರ ಪತ್ರಿಕೆಗಳು ಪಡೆಯುವುದು ಅವರ ಹಕ್ಕು ಹಾಗೂ ಮಂಡಳಿ ಸಾಕಷ್ಟು ಪತ್ರಿಕೆಗಳನ್ನು ನೀಡುವುದು ಅವರ ಕರ್ತವ್ಯ. ಕೆಲವೊಂದು ವಿದ್ಯಾರ್ಥಿಗಳ ಅಕ್ಷರಗಳು ದೊಡ್ಡದಾಗಿ ಬರೆಯುತ್ತಾರೆ. ಅವರಿಗೆ ಹೆಚ್ಚುವರಿ ಪತ್ರಿಕೆಗಳ ಅಗತ್ಯವಿರುತ್ತದೆ. ಆದರೆ, ಈಗ ನಿಗದಿತ ಪತ್ರಿಕೆಯಲ್ಲಿಯೇ ಪರೀಕ್ಷೆ ಬರೆಯಿರಿ ಎನ್ನುವುದು ಸಲ್ಲ ಎಂದು ವಿದ್ಯಾರ್ಥಿಗಳ ಪೋಷಕರು, ಉಪನ್ಯಾಸಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.