ಒಂದೇ ಒಂದು ಅನರ್ಹ ಶಾಸಕ ಗೆದ್ದರೂ ಸಂವಿಧಾನಕ್ಕೆ ಹಿನ್ನಡೆ: ಮಾಜಿ ಸ್ಪೀಕರ್ ರಮೇಶ್ ಕುಮಾರ್
ಗೋಕಾಕ್, ನ.28: ಅನರ್ಹ ಶಾಸಕರಿಂದ ತೆರವಾಗಿರುವ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆಯಲ್ಲಿ, ಒಂದೇ ಒಂದು ಕ್ಷೇತ್ರದಲ್ಲಿ ಅನರ್ಹ ಶಾಸಕರು ಗೆದ್ದರೂ ಸಂವಿಧಾನಕ್ಕೆ ಹಿನ್ನಡೆಯಾದಂತೆ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಉಪ ಚುನಾವಣೆಯು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಅಲ್ಲ, ಸಂವಿಧಾನ ಪರ ಹಾಗೂ ವಿರುದ್ಧದ ಚುನಾವಣೆ. 15 ಕ್ಷೇತ್ರಗಳಲ್ಲೂ ಸಂವಿಧಾನಕ್ಕೆ ಗೆಲುವು ಸಿಗಬೇಕು ಎಂದರು.
ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಉಳಿದಿರುವ ತೀರ್ಪನ್ನು ಮತದಾನದ ದಿನ ಮತದಾರರು ಕೊಡಬೇಕು. ನಾನು ಕಾಗವಾಡ ವಿಧಾನಸಭಾ ಕ್ಷೇತ್ರಕ್ಕೆ ಹೋದಾಗ ಅನರ್ಹ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಶ್ರೀಮಂತ್ ಪಾಟೀಲ್‌ಗೆ ಹೃದಯಾಘಾತವಾಗಿರಬೇಕು. ಏನು ಮಾಡೋದು ಕೆಲವರಿಗೆ ನನ್ನ ಹೆಸರು ಕೇಳಿದರೆ ಹೃದಯಾಘಾತವಾಗುತ್ತದೆ ಎಂದು ರಮೇಶ್ ಕುಮಾರ್ ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದು ಗೌರವಯುತವಾದ ಪ್ರಕ್ರಿಯೆ. ಅನರ್ಹತೆ ಅನ್ನೋದು ಶಿಕ್ಷೆ. ಕದ್ದು ಮುಚ್ಚಿ ಮುಂಬೈಗೆ ಓಡಿ ಹೋಗಿ ಅಲ್ಲಿಂದ ರಾಜೀನಾಮೆ ರವಾನಿಸುವುದು ಸ್ವೀಕಾರ್ಹವಲ್ಲದ ಪ್ರಕ್ರಿಯೆ ಎಂದು ಅನರ್ಹ ಶಾಸಕ ಹಾಗೂ ಗೋಕಾಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ವಿರುದ್ಧ ಅವರು ಕಿಡಿಗಾರಿದರು.
ಪಕ್ಷಾಂತರ ನಿಷೇಧ ಕಾಯ್ದೆ, ಪ್ರಜಾಪ್ರತಿನಿಧಿ ಕಾಯ್ದೆ ಮತ್ತಷ್ಟು ಶಕ್ತಿಯುತವಾಗಿ, ಸಮಪರ್ಕವಾಗಿ ರೂಪುಗೊಳ್ಳಬೇಕು. ಆಗ ಮಾತ್ರ ಈ ಪಕ್ಷಾಂತರ ಪಿಡುಗಿಗೆ ಕಡಿವಾಣ ಹಾಕಲು ಸಾಧ್ಯ. ಮತದಾರರ ಮತಗಳಿಗೆ ಗೌರವ ಕೊಡಲು ಸಾಧ್ಯ ಎಂದು ರಮೇಶ್ ಕುಮಾರ್ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಚಮಚಾಗಿರಿ ಮಾಡುವವರಿಗೆ ಮಾತ್ರ ಮನ್ನಣೆ ಸಿಗುತ್ತದೆ ಎಂದು ರಮೇಶ್ ಜಾರಕಿಹೊಳಿ ಮಾಡಿರುವ ಆರೋಪಕ್ಕೆ ತಿರುಗೇಟು ನೀಡಿದ ಅವರು, ಚಮಚಾಗಳಿಗೆ ಮಾತ್ರ ಚಮಚಾಗಿರಿ ಬಗ್ಗೆ ಗೊತ್ತಿರುತ್ತದೆ. ನಾನು ಅಪ್ಪ-ಅಮ್ಮನಿಗೆ ಹುಟ್ಟಿದವನು. ನನಗೆ ಈ ಚಮಚಾಗಿರಿ ಬಗ್ಗೆ ಅಷ್ಟೊಂದು ಗೊತ್ತಿಲ್ಲ ಎಂದರು.