ಬಿಜೆಪಿ ನಾಯಕರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಎಚ್.ಡಿ.ರೇವಣ್ಣ

Update: 2019-11-28 16:56 GMT

ಮಂಡ್ಯ, ನ.28: ಕೆ.ಆರ್.ಪೇಟೆಯಲ್ಲಿ ಉಪಚುನಾವಣೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರವಾಗಿ ಬಿರುಸಿನ ಪ್ರಚಾರ ಮುಂದುವರಿಸಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ, ಇದು ಯಡಿಯೂರಪ್ಪ ವರ್ಸಸ್ ಕೆ.ಆರ್.ಪೇಟೆ ಸ್ವಾಭಿಮಾನಿ ಮತದಾರರ ಚುನಾವಣೆ ಎಂದು ಹೇಳಿದ್ದಾರೆ.

ತಮ್ಮ ಪ್ರಚಾರದುದ್ದಕ್ಕೂ ಬಿಜೆಪಿ ಮುಖಂಡರನ್ನು ಟೀಕಿಸಿದ ಅವರು, ಸಿಎಂ ಯಡಿಯೂರಪ್ಪ, ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಿಎಂ ಸದಾನಂದಗೌಡ ಮತ್ತು ಬಿಜೆಪಿ ಮುಖಂಡರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ಬಜೆಟ್ ಮಂಡ್ಯ, ಹಾಸನ ಬಜೆಟ್ ಎಂದು ಲೇವಡಿ ಮಾಡಿದ್ದವರು. ಮೈತ್ರಿ ಸರಕಾರದ ಅನುದಾನ ತಡೆ ಹಿಡಿದಿರುವವರು ಯಾವ ಆಧಾರದಲ್ಲಿ ವೋಟ್ ಕೇಳುತ್ತಾರೆ ಎಂದು ಅವರು ಪ್ರಶ್ನಿಸಿದರು.

ಕೆ.ಆರ್.ಪೇಟೆಗೆ ಯಡಿಯೂರಪ್ಪ ಕೊಡುಗೆ ಏನೂ ಇಲ್ಲ. ಇಂಧನ ಇಲಾಖೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದೆ. ಮಂಡ್ಯಕ್ಕೆ ಎಷ್ಟು ವಿದ್ಯುತ್ ಉಪ ಘಟಕಗಳನ್ನು ತಂದಿದ್ದೇನೆ ಅವರಿಗೆ ಗೊತ್ತಾ ಎಂದು ಪ್ರಶ್ನಿಸಿದರು.

ಬಿಜೆಪಿಯ ಕೆಲವು ಮುಖಂಡರು ಹೈಕೋರ್ಟ್ ರಕ್ಷಣೆಯಲ್ಲಿದ್ದಾರೆ. ಅರವಿಂದ ಲಿಂಬಾವಳಿ ಏನೋ ಎ ಟೀಂ, ಬಿ ಟೀಂ ಅಂತಾನೆ. ಅವನದನ್ನ ಎಲ್ಲವನ್ನೂ ಬಿಚ್ಚಬೇಕಾಗುತ್ತೆ. ಅದಕ್ಕೂ ಸ್ಟೇ ತಂದವನೆ. ಗುತ್ತಿಗೆದಾರರ ಲಕ್ಷಾಂತರ ರೂ. 6ನೇ ತಾರೀಕಿನವರೆಗೆ ಬಿಡುಗಡೆಯಾಗದಂತೆ ಸಿಎಂ ಪುತ್ರ ವಿಜಯೇಂದ್ರನೇ ತಡೆ ಹಿಡಿಸಿದ್ದಾನೆ. ಬೆಳಗ್ಗೆ ಎದ್ದರೆ ಬರೀ ವ್ಯಾಪಾರ ಇವನದ್ದು ಎಂದು ಅವರು ಆರೋಪಿಸಿದರು.

ಸದಾನಂದಗೌಡ ಸಿಎಂ ಆಗಿ 6 ತಿಂಗಳು ಇರಲಿಲ್ಲ. ಜಾಸ್ತಿ ಮಾತಾಡಿದ್ದಕ್ಕೆ 6 ತಿಂಗಳಿಗೆ ಪುತ್ತೂರು ಬಸ್ ಹತ್ತಿಸಿದ ಯಡಿಯೂರಪ್ಪ. ಅವನು ಕೂತ್ಕೋ ಅಂದ್ರೆ ಕೂರಬೇಕು, ಏಳು ಅಂದ್ರೆ ಏಳಬೇಕು ಎಂದ ಅವರು, ಕಾರಜೋಳ ಹೋಗಿದ್ದು ದೇವೇಗೌಡರ ಕಾರ್ಖಾನೆಯಿಂದ ಎಂದು ಅವರು ಲೇವಡಿ ಮಾಡಿದರು.

ಡಕೋಟ ಎಕ್ಸ್‍ಪ್ರೆಸ್ ಇಟ್ಕೊಂಡಿದ್ದ ಸುಧಾಕರ್ ಗೆ ಏನು ಗೊತ್ತು? ಚಿಕ್ಕಬಳ್ಳಾಪುರವನ್ನ ಜಿಲ್ಲೆ ಮಾಡಿದ್ದು ಹೆಚ್ಡಿಕೆ. ಅನರ್ಹ ಎಂದರೆ ಎಂಎಲ್‍ಎ ಆಗೋಕೆ ನಾಲಾಯಕ್. ಅವರನ್ನ ಮನೆಗೆ ಕಳಿಸಬೇಕು ಎಂದು ರೇವಣ್ಣ ಕರೆ ನೀಡಿದರು.

‘ಬಾಂಬೆ ಗಿರಾಕಿಗೆ ಏನು ಗೊತ್ತು?’
ಒಂದು ಹಳ್ಳಿಗೆ ಹೋಗದ ಬಾಂಬೆ ಗಿರಾಕಿಗೆ ನಮ್ಮ ಕಾರ್ಯಕ್ರಮ ಏನು ಗೊತ್ತು? ದೇವೇಗೌಡ ಇಲ್ಲದಿದ್ದರೆ ಶಾಸಕನೇ ಆಗುತ್ತಿರಲಿಲ್ಲ. ಕೃತಜ್ಞತೆ ಇಲ್ಲದ ವ್ಯಕ್ತಿ ಆತ. ದೇವರೇ ಆತನಿಗೆ ತಕ್ಕ ಶಿಕ್ಷೆ ಕೊಡುತ್ತಾನೆ ಎಂದು ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ವಿರುದ್ಧ ರೇವಣ್ಣ ಹರಿಹಾಯ್ದರು.

ಕೆ.ಆರ್.ಪೇಟೆ ಒಂದರಲ್ಲೇ 750 ಕೋಟಿ ವರ್ಕ್ ನಡೀತ ಇದೆ. ಇವನು ಮುನ್ಸಿಪಾಲಿಟಿ ಮೆಂಬರನ್ನೂ ಬಿಟ್ಟಿಲ್ಲ. ಚೆಕ್, ಖಾಲಿ ಬಾಂಡ್ ಪೇಪರ್ ಬರೆಸಿಕೊಂಡು ಹಣ ವಸೂಲಿ ಮಾಡಿದ್ದಾನಂತೆ. ಕುಮಾರಸ್ವಾಮಿ ತಂದ ಕಾನೂನು ಜಾರಿಯಾದರೆ ಮೊದಲು ಒಳ ಹೋಗುವವನೇ ಇವನು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News