×
Ad

ಬಿಜೆಪಿ ಜೊತೆ ಅನರ್ಹ ಶಾಸಕನ ಡೀಲ್ ?: ಪೆನ್​ ಡ್ರೈವ್​ ಪ್ರದರ್ಶಿಸಿ ದಾಖಲೆ ಇದೆ ಎಂದ ಮಾಜಿ ಸಂಸದ

Update: 2019-11-28 22:55 IST
ಬಿಎಸ್‌ವೈ- ಶಿವರಾಮೇಗೌಡ- ನಾರಾಯಣಗೌಡ

ಮಂಡ್ಯ, ನ.28: "ಅನರ್ಹ ಶಾಸಕ ನಾರಾಯಣಗೌಡ ಬಿಜೆಪಿ ಮುಖಂಡರಿಂದ ಹಣ ಪಡೆದು ಮೈತ್ರಿ ಸರ್ಕಾರ ಉರುಳಿಸಿದ್ದಾರೆ. ಇದಕ್ಕೆ ಆಡಿಯೋ ದಾಖಲೆ ಇದೆ" ಎಂದು ಮಾಜಿ ಸಂಸದ ಎಲ್​.ಆರ್​.ಶಿವರಾಮೇಗೌಡ ಬಾಂಬ್​ ಸಿಡಿಸಿದ್ದಾರೆ.

ಕೆ.ಆರ್​.ಪೇಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರಾಗಿದ್ದ ನಾರಾಯಣಗೌಡ ಅವರು ಬಿಜೆಪಿ ಮುಖಂಡರ ಜತೆ ನಡೆಸಿರುವ ಸಂಭಾಷಣೆಯ ದಾಖಲೆ ಇದೆ ಎಂದು ಪೆನ್​ ಡ್ರೈವ್​ ಪ್ರದರ್ಶಿಸಿದರು.

ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಾರಾಯಣಗೌಡ ಬಿಜೆಪಿ ನಾಯಕರ ಜೊತೆ ನಡೆಸಿರುವ ಸಂಭಾಷಣೆ ಇದಾಗಿದೆ. ಮೊದಲು 5 ಕೋಟಿ ರೂಪಾಯಿಗೆ ಒಪ್ಪಂದ ಆಗಿತ್ತು. ಆದರೆ ನಾರಾಯಣಗೌಡ ಇದು ಸಾಲುವುದಿಲ್ಲ ಎಂದು ಹಿಂದಕ್ಕೆ ಬಂದಿದ್ದರು. ನಂತರ ಒಪ್ಪಂದ ನಡೆದು ಹಣ ಪಡೆದು ರಾಜೀನಾಮೆ ಸಲ್ಲಿಸಿ ಮುಂಬೈಗೆ ತೆರಳಿದರು. ಈ ಆಡಿಯೋ ಬಗ್ಗೆ ಹೈಕೋರ್ಟ್​ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಯಬೇಕು. ನಾರಾಯಣಗೌಡ ತಾನು ಹಣ ಪಡೆದಿಲ್ಲ ಎಂದು ಹಾಗೂ ಸಿಎಂ ಯಡಿಯೂರಪ್ಪ ತಾವು ಹಣ ನೀಡಿಲ್ಲ ಎಂದು ಧರ್ಮಸ್ಥಳದ ಮುಂಜುನಾಥನ ಮುಂದೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.

ಮೈತ್ರಿ ಸರ್ಕಾರದಲ್ಲಿ ಮಂಡ್ಯ ಜಿಲ್ಲೆಗೆ ನಿಗದಿಯಾಗಿದ್ದ 8,500 ಕೋಟಿ ರೂಪಾಯಿ ಅನುದಾನವನ್ನು ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿದೆ. ಹೀಗಾಗಿ ಬಿಜೆಪಿಯವರು ಕೆ.ಆರ್​.ಪೇಟೆಯಲ್ಲಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News