ಶಿವಮೊಗ್ಗದಲ್ಲಿಯೂ ಗಗನಕ್ಕೇರಿದ ಈರುಳ್ಳಿ ಬೆಲೆ !

Update: 2019-11-29 13:16 GMT

ಶಿವಮೊಗ್ಗ, ನ. 29: ದೇಶದ ರಾಜಧಾನಿ ದೆಹಲಿ ಸೇರಿದಂತೆ, ರಾಜ್ಯಾದ್ಯಂತ ಈರುಳ್ಳಿ ಬೆಲೆ ಗಗನಕ್ಕೇರಿದೆ. ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿಯೂ ಈರುಳ್ಳಿ ಬೆಲೆ ಏರುಗತಿಯಲ್ಲಿ ಸಾಗಿದೆ. ದರ ಹೆಚ್ಚಳವು ನಾಗರಿಕರ ಕಣ್ಣಲ್ಲಿ ನೀರು ತರಿಸಿದೆ!

ಜಿಲ್ಲೆಯಲ್ಲಿ ಈರುಳ್ಳಿ ಬೆಳೆ ಬೆಳೆಯುವುದಿಲ್ಲ. ಇದಕ್ಕೆ ಸಂಬಂಧಿಸಿದ ಪ್ರತ್ಯೇಕ ಮಾರುಕಟ್ಟೆಯೂ ಇಲ್ಲ. ತೋಟಗಾರಿಕೆ ಹಾಗೂ ಕೃಷಿ ಇಲಾಖೆ ಮಾಹಿತಿ ಅನುಸಾರ, ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯ ಪ್ರದೇಶ ಶೂನ್ಯವಾಗಿದೆ. ಆದರೆ ಬೆರಳೆಣಿಕೆಯ ರೈತರು ಮಾತ್ರ ಬೆಳೆಯುತ್ತಾರೆ. ಅದನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಾರೆ. ಈ ಪ್ರಮಾಣ ನಗಣ್ಯವಾಗಿದೆ ಎಂದು ಕೆಲ ರೈತರು ಅಭಿಪ್ರಾಯಪಡುತ್ತಾರೆ. 

ಉಳಿದಂತೆ ಜಿಲ್ಲೆಗೆ ಬೆಂಗಳೂರು ಎಪಿಎಂಸಿ ಹಾಗೂ ನೆರೆ ಜಿಲ್ಲೆಗಳಾದ ಚಿಕ್ಕಮಗಳೂರು, ದಾವಣಗೆರೆ, ಚಿತ್ರದುರ್ಗದಿಂದ ಹೆಚ್ಚಿನ ಪ್ರಮಾಣದ ಈರುಳ್ಳಿ ಬರುತ್ತದೆ. ಆದರೆ ದಿಢೀರ್ ಬೆಲೆ ಹೆಚ್ಚಳ ಕಾರಣದಿಂದ, ಕಳೆದ ಕೆಲ ದಿನಗಳಿಂದ ಜಿಲ್ಲೆಗೆ ಬರುತ್ತಿರುವ ಈರುಳ್ಳಿ ಪ್ರಮಾಣ ಕಡಿಮೆಯಾಗಿದೆ ಎಂದು ಸ್ಥಳೀಯ ವರ್ತಕರು ಮಾಹಿತಿ ನೀಡುತ್ತಾರೆ. 

ಏರಿಕೆ: ಶಿವಮೊಗ್ಗ ನಗರದಲ್ಲಿ ಉತ್ತಮ ಗುಣಮಟ್ಟದ ಕೆ.ಜಿ. ಈರುಳ್ಳಿಯ ಬೆಲೆ 120 ರಿಂದ 130 ರೂ.ಗಳಿದೆ. ಬೆಲೆ ಹೆಚ್ಚಳದ ಕಾರಣದಿಂದ ನಾಗರಿಕರು ಈರುಳ್ಳಿ ಖರೀದಿಗೆ ಹಿಂದೆ ಮುಂದೆ ನೋಡುವಂತಾಗಿದೆ. ಕೆಲ ತರಕಾರಿ ಮಾರಾಟ ಮಾಡುವ ವರ್ತಕರು ಈರುಳ್ಳಿ ವ್ಯಾಪಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ.

'ಕಳೆದ ಕೆಲ ತಿಂಗಳುಗಳ ಹಿಂದೆ ಸುರಿದ ಭಾರೀ ಮಳೆ ಹಾಗೂ ಉಂಟಾದ ಪ್ರವಾಹದಿಂದ, ಈರುಳ್ಳಿ ಉತ್ಪಾದನೆ ಕಡಿಮೆಯಾಗಿದೆ. ಇನ್ನೊಂದೆಡೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ಈರುಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡುಬಂದಿದೆ. ಶಿವಮೊಗ್ಗ ಮಾರುಕಟ್ಟೆಗೆ ಹೊರ ಜಿಲ್ಲೆಗಳಿಂದ ಈರುಳ್ಳಿ ಬರುವುದರಿಂದ, ಇಲ್ಲಿನ ಬೆಲೆ ಇನ್ನಷ್ಟು ಹೆಚ್ಚುವಂತಾಗಿದೆ' ಎಂದು ವರ್ತಕರೋರ್ವರು ಅಭಿಪ್ರಾಯಪಡುತ್ತಾರೆ.

'ಬೆಲೆ ಹೆಚ್ಚಳದ ಕಾರಣದಿಂದ ಈರುಳ್ಳಿ ಖರೀದಿ ಕಡಿಮೆಗೊಳಿಸಲಾಗಿದೆ. ಕೆ.ಜಿ. ಖರೀದಿಸುತ್ತಿದ್ದವರು ಕಾಲು, ಅರ್ಧ ಕೆ.ಜಿ. ಕೊಂಡೊಯ್ಯುವಂತಾಗಿದೆ. ಯಾವಾಗ ಬೆಲೆ ಕಡಿಮೆಯಾಗಲಿದೆಯೋ ಎನ್ನುವಂತಾಗಿದೆ' ಎಂದು ಗ್ರಾಹಕರೋರ್ವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News