ಆಕಸ್ಮಿಕ ಬೆಂಕಿ ಅವಘಡ: ಐದು ಮನೆಗಳು ಸುಟ್ಟು ಭಸ್ಮ

Update: 2019-11-29 13:27 GMT

ಚಿಕ್ಕಮಗಳೂರು, ನ.29: ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಐದು ಮನೆಗಳು ಸುಟ್ಟು ಭಸ್ಮವಾಗಿ ಅಪಾರ ನಷ್ಟ ಸಂಭವಿಸಿರುವ ಘಟನೆ ಶುಕ್ರವಾರ ಕಡೂರು ತಾಲೂಕಿನ ತರುವನಹಳ್ಳಿ ಗ್ರಾಮದ ಭೋವಿ ಜನಾಂಗದವರ ಕಾಲನಿಯಲ್ಲಿ ವರದಿಯಾಗಿದೆ.

ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆ, ಭೋವಿ ಸಮುದಾಯದ ಜನರು ವಾಸವಿದ್ದ ಕಾಲನಿಯಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಿದ್ದ ಮನೆಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯ ಕೆನ್ನಾಲಿಗೆ ಅಕ್ಕಪಕ್ಕದಲ್ಲಿದ್ದ ಮತ್ತೆ ಮೂರು ಗುಡಿಸಲು ಹಾಗೂ ಒಂದು ಹೆಂಚಿನ ಮನೆಗೆ ವ್ಯಾಪಿಸಿದೆ. ಗ್ರಾಮಸ್ಥರು ಈ ವೇಳೆ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರೂ ನಿಯಂತ್ರಣಕ್ಕೆ ಬಾರದ ಬೆಂಕಿ ಹೆಂಚಿನ ಮನೆ ಸೇರಿದಂತೆ ನಾಲ್ಕು ಗುಡಿಸಲುಗಳನ್ನೂ ಆಪೋಶನಕ್ಕೆ ಪಡೆದಿದೆ ಎಂದು ತಿಳಿದುಬಂದಿದೆ.

ತೀವ್ರವಾಗಿ ವ್ಯಾಪಿಸಿದ್ದ ಬೆಂಕಿಯಿಂದಾಗಿ ಐದೂ ಮನೆಗಳೂ ಸುಟ್ಟು ಭಸ್ಮವಾಗಿದ್ದು, ಹಣ, ಬಟ್ಟೆ, ಪಾತ್ರೆ, ದವಸ ಧಾನ್ಯ ಸೇರಿದಂತೆ ಎಲ್ಲವೂ ಸುಟ್ಟುಕರಕಲಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಕಡೂರು ಆಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಿಸಲು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸಪಟ್ಟಿದ್ದಾರೆ. ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಸಕಾಲದಲ್ಲಿ ನಿಯಂತ್ರಿಸಿದ ಪರಿಣಾಮ ಬೆಂಕಿ ಅಕ್ಕಪಕ್ಕದ ಮನೆಗಳಿಗೆ ವ್ಯಾಪಿಸುವುದ ತಪ್ಪಿದೆ ಎಂದು ತಿಳಿದುಬಂದಿದೆ.

ಘಟನೆಯಿಂದಾಗಿ ಸುಮಾರು 30 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಮನೆಗಳನ್ನು ಕಳೆದುಕೊಂಡು ಐದು ಮನೆಗಳ ಸದಸ್ಯರು ಗ್ರಾಮದ ದೇವಾಲಯವೊಂದರಲ್ಲಿ ಆಶ್ರಯ ಪಡೆದಿದ್ದಾರೆಂದು ತಿಳಿದು ಬಂದಿದೆ. ಘಟನಾ ಸ್ಥಳದಕ್ಕೆ ಕಡೂರು ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಕಡೂರು ತಹಶೀಲ್ದಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಅಂದಾಜಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News