'ಮಾನನಷ್ಟ ಕೇಸ್ ಹಾಕಿದರೆ....': ಬಿಎಸ್‌ವೈಗೆ ಸಿದ್ದರಾಮಯ್ಯ ಎಚ್ಚರಿಕೆ

Update: 2019-11-29 16:29 GMT
ಸಿದ್ದರಾಮಯ್ಯ-ಬಿಎಸ್‌ವೈ (ಫೈಲ್ ಚಿತ್ರ )

ಬೆಳಗಾವಿ, ನ. 29: ‘ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯದಲ್ಲಿ ಮತ್ತೆ ನಮ್ಮ ಸರಕಾರ ಅಧಿಕಾರಕ್ಕೆ ಬರಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಮನೆಗೆ ಹೋಗಲಿದ್ದಾರೆ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ಜಿಲ್ಲೆಯ ಅಥಣಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಪರ ಪ್ರಚಾರದ ವೇಳೆ ಮಾತನಾಡಿದ ಅವರು, ಹದಿನೈದು ಕ್ಷೇತ್ರಗಳಲ್ಲಿಯೂ ಅನರ್ಹರು ನೂರಕ್ಕೆ ನೂರು ಸೋಲಲಿದ್ದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಪಕ್ಷಾಂತರಿಗಳನ್ನು ಸೋಲಿಸಲು ಜನ ತೀರ್ಮಾನಿಸಿದ್ದಾರೆ ಎಂದು ಹೇಳಿದರು.

ಉಪಚುನಾವಣೆ ರಾಜ್ಯದ ಜನರಿಗೆ ಬೇಕಿರಲಿಲ್ಲ. ಆದರೆ, ಇದರಿಂದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಶ್ರೀಮಂತರ ಪಾಟೀಲ್‌ಗೆ ಲಾಭವಾಗಿದೆ ಎಂದ ಅವರು, ಸಂತೆಯಲ್ಲಿ ಹಸು-ಕುರಿಗಳಂತೆ ಇವರೆಲ್ಲ ಮಾರಾಟವಾಗಿದ್ದಾರೆ. ಇವರು ಯಾವ ಮುಖಹೊತ್ತು ಜನರ ಬಳಿಗೆ ಹೋಗುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಮತದಾರರನ್ನು ಒಂದು ಮಾತು ಕೇಳದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಜನರನ್ನು ಅವಮಾನಿಸಿದ ವ್ಯಕ್ತಿಗಳಿಗೆ ಬುದ್ದಿ ಕಲಿಸುವ ಅವಕಾಶ ನಿಮಗೆ ಬಂದಿದೆ ಎಂದ ಅವರು, ಮಹೇಶ್ ಕುಮಟಳ್ಳಿ ತಮ್ಮ ಸ್ವಗ್ರಾಮ ತೆಲಸಂಗಕ್ಕೆ ಅವಮಾನ ಮಾಡಿದ್ದಾರೆ. ಇಂತಹ ಅಗೌರವ ಮಾಡಿದ ಮಹೇಶ ಕುಮಟಳ್ಳಿ ನೀವು ಶಾಸಕರಾಗಲು ಯೋಗ್ಯರಲ್ಲ ಎಂದು ಲೇವಡಿ ಮಾಡಿದರು.

ಅನರ್ಹರು ಎಂದರೆ ಅವರು ಶಾಸಕರಾಗಲು ನಾಲಾಯಕ್. ಸುಪ್ರೀಂ ಕೋರ್ಟ್‌ನಿಂದಲೇ ಅನರ್ಹತೆ ಹಣೆಪಟ್ಟಿ ಕಟ್ಟಿಕೊಂಡು ಬಂದಿದ್ದಾರೆ. ಇವರನ್ನು ಶಾಶ್ವತವಾಗಿ ಮನೆಗೆ ಕಳುಹಿಸುವ ಜವಾಬ್ದಾರಿ ನಿಮ್ಮದು ಎಂದು ಅಥಣಿ ಕ್ಷೇತ್ರದ ಜನರಿಗೆ ಮನವಿ ಮಾಡಿದರು.

ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ಚುನಾವಣೆಗಳಲ್ಲಿ ಪಕ್ಷಾಂತರಿಗಳನ್ನು ಮತದಾರರು ಸೋಲಿಸಿದ್ದಾರೆ. ಅದೇ ರೀತಿಯಲ್ಲಿ ರಾಜ್ಯದಲ್ಲಿಯೂ ಮತದಾರರು ಅನರ್ಹರನ್ನು ಸೋಲಿಸಲಿದ್ದಾರೆಂದ ಅವರು, ಜನರೆ ಅನರ್ಹರನ್ನು ಮನೆ ಕಳುಹಿಸುವ ಮಾತುಗಳನ್ನಾಡುತ್ತಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿ ನೆಪದಲ್ಲಿ ರಾಜೀನಾಮೆ ನೀಡಿದ್ದೇವೆ ಎಂದು ಅನರ್ಹರು ಹೇಳುತ್ತಿದ್ದಾರೆ. ಆದರೆ, ಬಿಎಸ್‌ವೈ ಸರಕಾರ 10 ಸಾವಿರ ರೂ.ವನ್ನು ನೀಡಿದ್ದು ಬಿಟ್ಟರೆ, ಬಿದ್ದ ಮನೆಗಳಿಗೆ, ಬೆಳಹಾನಿಗೆ ಇನ್ನೂ ಪರಿಹಾರವನ್ನೇ ನೀಡಿಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್ ಖಾಲಿ ಮಾಡಿಸುವ ಮಾತುಗಳನ್ನಾಡಿದ ರಮೇಶ್ ಜಾರಕಿಹೊಳಿ ಉಪಚುನಾವಣೆ ಬಳಿಕ ಅವರೇ ಖಾಲಿಯಾಗಲಿದ್ದಾರೆ. ಇನ್ನು ಸಚಿವ ಕೆ.ಎಸ್. ಈಶ್ವರಪ್ಪ ಬಹಳ ದೊಡ್ಡವರು. ಅವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ನನ್ನ ವಿರುದ್ಧ ಮಾನನಷ್ಟ ಕೇಸನ್ನು ಬಿಎಸ್‌ವೈ ಹಾಕಿದರೆ ಅವರ ನಿಜಬಣ್ಣ ಬಯಲು ಮಾಡುವೆ’
-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News