ಚುನಾವಣೆಯ ಬಳಿಕ ಹಿಂಬಾಗಿಲ ಸರಕಾರ ಪತನ: ದಿನೇಶ್ ಗುಂಡೂರಾವ್
ರಾಣೆಬೆನ್ನೂರು, ನ.29: ಉಪ ಚುನಾವಣೆ ಬಳಿಕ ಬಿಜೆಪಿ ಸರಕಾರ ಅಲ್ಪಮತಕ್ಕೆ ಕುಸಿಯಲಿದ್ದು, ಹಿಂಬಾಗಿಲ ಸರಕಾರ ಪತನವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ ಪರ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಮೂರು ತಿಂಗಳಿನಿಂದ ಯಾವ ಸಚಿವರೂ ವಿಧಾನಸೌಧಕ್ಕೆ ಹೋಗಿಲ್ಲ. ವಿಧಾನಸೌಧದಲ್ಲಿ ಒಂದು ರೀತಿಯ ಸೂತಕದ ಛಾಯೆ ಆವರಿಸಿಕೊಂಡಿದೆ. ರಾಜ್ಯದಲ್ಲಿ ಸರಕಾರ ಇದೆಯೇ? ಆಡಳಿತ ಯಂತ್ರ ಇದೆಯೇ? ಎನ್ನುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಅವರು ಕಿಡಿಗಾರಿದರು.
ಉಪ ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 12ರಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದೆ. ಆದರೆ, ಸೋಲಿನ ಭೀತಿಯಿಂದ ಮತ್ತೆ ಆಪರೇಷನ್ ಕಮಲ ನಡೆಸುವ ಯೋಚನೆ ಮಾಡುತ್ತಿರುವ ಬಿಜೆಪಿ ನಾಯಕರು, ಈ ಸಂಬಂಧ ಹೇಳಿಕೆ ನೀಡಲು ಆರಂಭಿಸಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕಿದರೆ ಅದರ ಪರಿಣಾಮವನ್ನು ಬಿಜೆಪಿ ನಾಯಕರು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವರು, ಶಾಸಕರು, ಬಿಜೆಪಿ ನಾಯಕರು, ಪ್ರಚಾರಕ್ಕಾಗಿ 15 ಕ್ಷೇತ್ರಗಳಲ್ಲಿ ಓಡಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಪ್ರವಾಹ ಬಂದಾಗ ಇವರೆಲ್ಲ ಎಲ್ಲಿ ಹೋಗಿದ್ದರು? ನೆರೆ ಪ್ರದೇಶಗಳಲ್ಲಿ ಹೀಗೆ ಏಕೆ ಓಡಾಡಲಿಲ್ಲ? ಏಕೆ ಸಂತ್ರಸ್ತರ ನೋವು ಕೇಳಲಿಲ್ಲ? ಹಾಗಾದರೆ ಚುನಾವಣೆ ಮಾತ್ರವೇ ಇವರ ಆದ್ಯತೆಯೇ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಕೋಳಿವಾಡ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ಮಾಜಿ ಸಚಿವ ಆರ್.ಬಿ.ತಿಮ್ಮಾಪುರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.