ಸವಿತಾ ಸಮಾಜಕ್ಕೆ ಅವಮಾನ ಮಾಡಿಲ್ಲ: ಸಿದ್ದರಾಮಯ್ಯ ಸ್ಪಷ್ಟಣೆ
ಬೆಂಗಳೂರು, ನ.29: ಹರಿಹರದ ಕುಮಾರ ಪಟ್ಟಣದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾಗ ಸವಿತಾ ಸಮಾಜಕ್ಕೆ ನೋವಾಗುವಂತೆ ಮಾತನಾಡಿದ್ದೇನೆ ಎಂದು ಮಾಧ್ಯಮಗಳು ವರದಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅಂತಹ ಯಾವುದೇ ದುರುದ್ದೇಶದಿಂದ ನಾನು ಮಾತುಗಳನ್ನು ಆಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದ್ದಾರೆ.
ರಾಜಕೀಯ ದುರುದ್ದೇಶದಿಂದ ನನ್ನ ಮಾತುಗಳನ್ನು ತಪ್ಪಾಗಿ ವ್ಯಾಖ್ಯಾನಿಸಿ ಅಪಪ್ರಚಾರ ನಡೆಸುತ್ತಿರುವುದನ್ನು ನಾನು ಖಂಡಿಸುತ್ತೇನೆ. ಸವಿತಾ ಸಮಾಜವೂ ಸೇರಿದಂತೆ ತಳಸಮುದಾಯಗಳ ಬಗೆಗಿನ ನನ್ನ ಗೌರವ ಮತ್ತು ಕಾಳಜಿ ಮಾತುಗಳದ್ದಲ್ಲ, ಆಚರಣೆಯದ್ದು ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿಯಾಗಿ ನಾನು ಜಾರಿಗೆ ತಂದಿರುವ ನೂರಾರು ಕಾರ್ಯಕ್ರಮಗಳು ಇದಕ್ಕೆ ಸಾಕ್ಷಿ. ಅಧಿಕಾರದಲ್ಲಿ ಇರಲಿ, ಇರದೆ ಇರಲಿ ನನ್ನ ಬದ್ಧತೆ ಅಬಾಧಿತವಾದುದು. ನನ್ನ ರಾಜಕೀಯ ಜೀವನದುದ್ದಕ್ಕೂ ತಳ ಸಮುದಾಯದ ಎಲ್ಲ ಜಾತಿಗಳು ನನ್ನನ್ನು ಅಪಾರ ಪ್ರೀತಿ ಮತ್ತು ಅಭಿಮಾನದಿಂದ ಬೆಂಬಲಿಸುತ್ತಾ ಬಂದಿರುವುದನ್ನು ಸಹಿಸಿಕೊಳ್ಳಲಾಗದವರು ಇಂತಹ ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಸವಿತಾ ಸಮಾಜದ ನನ್ನ ಬಂಧುಗಳು ನನ್ನ ಮೇಲೆ ವಿಶ್ವಾಸ ಇಟ್ಟು ಇಂತಹ ಅಪಪ್ರಚಾರಕ್ಕೆ ಕಿವಿಗೊಡಬಾರದು ಎಂದು ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.