ನ್ಯಾಯಾಧೀಶರ ಪಿಂಚಣಿ ತಿದ್ದುಪಡಿಗೆ ಅವಕಾಶವಿಲ್ಲ: ರಾಜ್ಯ ಸರಕಾರದ ಕ್ರಮ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು, ನ.29: ನ್ಯಾಯಾಧೀಶರ ಪಿಂಚಣಿ ಮತ್ತು ಸಂಬಳಕ್ಕೆ ತಿದ್ದುಪಡಿ ಮಾಡಲು ರಾಜ್ಯ ಸರಕಾರಕ್ಕೆ ಅಧಿಕಾರವಿಲ್ಲ ಎಂದು ಹೇಳಿರುವ ಹೈಕೋರ್ಟ್, 2006ರ ಎ.1ರ ನಂತರ ನೇಮಕಗೊಂಡ ಜಿಲ್ಲಾ ಮತ್ತು ಸಿವಿಲ್ ನ್ಯಾಯಾಧೀಶರನ್ನು ಹೊಸ ನಿವೃತ್ತಿ ವೇತನ ಯೋಜನೆಗೆ ಒಳಪಡಿಸಿ ರಾಜ್ಯ ಸರಕಾರ ಜಾರಿಗೆ ತಂದಿದ್ದ ಕ್ರಮವನ್ನು ರದ್ದುಗೊಳಿಸಿದೆ.
ಅಪಘಾತದಲ್ಲಿ ಮೃತಪಟ್ಟಿದ್ದ ಜಿಲ್ಲಾ ನ್ಯಾಯಾಧೀಶ ರುದ್ರಮುನಿ ಕುಟುಂಬಕ್ಕೆ ಪಿಂಚಣಿ ನೀಡದಿರುವ ಕ್ರಮ ಪ್ರಶ್ನಿಸಿ ಅವರ ಪತ್ನಿ ಶೈಲಜಾ ಮತ್ತು ಅವರ ಮಕ್ಕಳು ಸಲ್ಲಿಸಿದ್ದ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ. ರಾಜ್ಯ ಸರಕಾರ ಪಿಂಚಣಿ ಯೋಜನೆ ವಾಪಸ್ ತೆಗೆದುಕೊಂಡಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಈ ಹಿಂದೆ ಇದ್ದಂತೆ ಸರಕಾರದ ವೆಚ್ಚದಲ್ಲೇ ಪಿಂಚಣಿ ನೀಡಬೇಕು. ಹೊಸ ಯೋಜನೆ ಅನ್ವಯ ಈಗಾಗಲೇ ನ್ಯಾಯಾಧೀಶರ ಸಂಬಳದಲ್ಲಿ ಕಡಿತ ಮಾಡಿದ ಹಣವನ್ನು ಹಿಂದಿರುಗಿಸಬೇಕು. ಅರ್ಜಿದಾರರ ಕುಟುಂಬಕ್ಕೆ ಒಂದು ತಿಂಗಳ ಅವಧಿಯಲ್ಲಿ ಪಂಚನೀ ಬಿಡುಗಡೆ ಮಾಡಬೇಕೆಂದು ನ್ಯಾಯಪೀಠ ನಿರ್ದೇಶಿಸಿದೆ. ಈ ಆದೇಶದಿಂದಾಗಿ ರಾಜ್ಯದ 500ಕ್ಕೂ ಹೆಚ್ಚು ನ್ಯಾಯಾಧೀಶರಿಗೆ ಅನುಕೂಲವಾಗಲಿದೆ ಎಂದು ಅರ್ಜಿದಾರರ ಪರ ವಕೀಲ ಪಿ.ಪಿ.ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.