ನೀತಿ ಸಂಹಿತೆ ಉಲ್ಲಂಘನೆ: ಲಕ್ಷಾಂತರ ಮೌಲ್ಯದ ನಗದು, ಅಕ್ರಮ ಮದ್ಯ ಜಪ್ತಿ

Update: 2019-11-29 16:54 GMT

ಬೆಳಗಾವಿ, ನ.29: ಉಪ ಚುನಾವಣೆ ನಡೆಯುತ್ತಿರುವ ಜಿಲ್ಲೆಯ ಮೂರು ಮತಕ್ಷೇತ್ರಗಳಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಒಟ್ಟಾರೆ 71 ಪ್ರಕರಣಗಳನ್ನು ದಾಖಲಿಸುವ ಮೂಲಕ 3.23 ಲಕ್ಷ ರೂ.ನಗದು ಸೇರಿದಂತೆ ಅಕ್ರಮ ಮದ್ಯ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟಾರೆ 3.23 ಲಕ್ಷ ನಗದು, 5.26 ಲಕ್ಷ ಮೌಲ್ಯದ 1371.99 ಲೀಟರ್ ಮದ್ಯ ಹಾಗೂ 4.04 ಲಕ್ಷ ರೂ.ಮೌಲ್ಯದ ಎಂಟು ಬೈಕ್ ಹಾಗೂ ಒಂದು ಸರಕು ಸಾಗಾಣಿಕೆ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಕಾಗವಾಡ ಮತಕ್ಷೇತ್ರದಲ್ಲಿ ಬಿಜೆಪಿ ಪಕ್ಷದ 9600 ಚಿಹ್ನೆ ಹೊಂದಿರುವ ಕ್ಯಾಪ್‌ಗಳು ಹಾಗೂ 22,500 ಶಲ್ಯಗಳನ್ನು ಮಾದರಿ ನೀತಿ ಸಂಹಿತೆ ತಂಡಗಳಿಂದ ವಶಪಡಿಸಿಕೊಳ್ಳಲಾಗಿದೆ.

ಎಫ್‌ಎಸ್‌ಟಿ, ಪೊಲೀಸ್, ಅಬಕಾರಿ ಮತ್ತು ಎಸ್‌ಎಸ್‌ಟಿ ತಂಡಗಳು ಪ್ರತ್ಯೇಕವಾಗಿ ಈ ವಸ್ತುಗಳನ್ನು ವಶಪಡಿಸಿಕೊಂಡಿದ್ದು, ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಮಾದರಿ ನೀತಿ ಸಂಹಿತೆ ನೋಡಲ್ ಅಧಿಕಾರಿ ಜಗದೀಶ್ ರೂಗಿ ತಿಳಿಸಿದ್ದಾರೆ.

ನೀತಿಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅಥಣಿ ಮತಕ್ಷೇತ್ರದಲ್ಲಿ 20, ಕಾಗವಾಡದಲ್ಲಿ 18 ಮತ್ತು ಗೋಕಾಕ್ ಮತಕ್ಷೇತ್ರದಲ್ಲಿ 33 ಹೀಗೆ ಒಟ್ಟು 71 ಪ್ರಕರಣಗಳು ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News