ನನ್ನ ಹೋರಾಟದ ಕಿಚ್ಚು ಇನ್ನೂ ಆರಿಲ್ಲ: ಮಾಜಿ ಪ್ರಧಾನಿ ದೇವೇಗೌಡ

Update: 2019-11-29 17:01 GMT

ಮಂಡ್ಯ, ನ.29: ನಾನು ಸುಮ್ಮನೆ ಮನೆಯಲ್ಲಿ ಕೂರುವ ವ್ಯಕ್ತಿಯಲ್ಲ, ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.

ಕೆ.ಆರ್.ಪೇಟೆ ಉಪಚುನಾವಣೆಯ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ಪರ ಕ್ಷೇತ್ರದ ಆನಗೋಳ ಸೇರಿದಂತೆ ವಿವಿಧೆಡೆ ಶುಕ್ರವಾರ ಪ್ರಚಾರ ನಡೆಸಿ ಮಾತನಾಡಿದ ಅವರು, ಇನ್ನೂ ಹೋರಾಟದ ಕಿಚ್ಚು ಆರಿಲ್ಲ ಎಂದರು. 1999ರಲ್ಲಿ ದೇವೇಗೌಡ ಕಥೆ ಮುಗಿಯಿತು ಅಂತ ನನ್ನ ಸಂಬಂಧಿಕರೇ ಮಾತನಾಡಿದ್ದರು. ದೇವೇಗೌಡನ ಕಥೆ ಮುಗೀತು, ಇನ್ನೇನಿದ್ರೂ ಬಂದು ಹೊಲದ ಕಡೆ ಇರಬೇಕು ಅಂತ ಹೇಳಿದ್ದರು. ಆದರೆ, ರಾಜ್ಯದ ರೈತರ ಪರ ಹೋರಾಟ ಮಾಡುವ ಶಕ್ತಿ ಮತ್ತು ಕಿಚ್ಚು ಇನ್ನೂ ಇದೆ ಎಂದು ಅವರು ಹೇಳಿದರು.

ಕಾಂಗ್ರೆಸ್, ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಸೇರಿದಂತೆ ಯಾವುದೇ ಪ್ರಾದೇಶಿಕ ಪಕ್ಷಗಳನ್ನು ತುಳಿಯಲು ಸಾಧ್ಯವಿಲ್ಲ. ಈ ರಾಷ್ಟ್ರೀಯ ಪಕ್ಷಗಳು ರಾಜ್ಯದ ನೀರಾವರಿ ವಿಚಾರದಲ್ಲಿ ನಿರ್ಲಕ್ಷ್ಯ ತೋರಿವೆ ಎಂದು ಅವರು ದೂರಿದರು.

ನಮ್ಮ ಅಭ್ಯರ್ಥಿ ದೇವರಾಜ್ ತುಂಬಾ ಮೃದು ಆಗಿರಬಹುದು. ಶಾಸಕನ ಸ್ಥಾನದಲ್ಲಿ ಕೂರಿಸಿದಾಗ ಪ್ರತಿಭೆ ಹೊರಬರಲಿದೆ. ಆತ ಶಾಸಕನಾಗಬೇಕೆಂಬ ಮಹಾದಾಸೆ ಇದೆ. ಆದ್ದರಿಂದ ಗೆಲ್ಲಿಸಿಕೊಡಿ. ದೇವರಾಜ್‍ಗೆ ಕೊಡುವ ಒಂದೊಂದು ಓಟು ತುಮಕೂರಿನಲ್ಲಿ ಸೋತ ದೇವೆಗೌಡನಿಗೆ ಕೊಡುವ ಓಟು ಎಂದು ತಿಳಿಯಿರಿ ಎಂದು ಅವರು ಮನವಿ ಮಾಡಿದರು.

ಹಳ್ಳಿ ಹಳ್ಳಿ ಸುತ್ತಿ ಮಾಜಿ ಸ್ಪೀಕರ್ ಕೃಷ್ಣ ಅವರನ್ನು ಗೆಲ್ಲಿಸಿದೆ. ಅಂದು ಮುಂಬರುವ ಲೋಕಸಭೆಗೆ ನಿಮ್ಮನ್ನು ನಿಲ್ಲಿಸುತ್ತೇನೆ, ದೇವರಾಜುಗೆ ಟಿಕೆಟ್ ಕೊಡುತ್ತೇನೆಂದು ಹೇಳಿದ್ದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತ ದೇವರಾಜ್‍ಗೆ ಈಗ ಕಾಲ ಕೂಡಿ ಬಂದಿದೆ ಎಂದು ಅವರು ಹೇಳಿದರು.

ಕೆ.ಆರ್.ಪೇಟೆ ಕ್ಷೇತ್ರದ ಮಾದಾಪುರ, ಸಾರಂಗಿ, ಅಗ್ರಹಾರಬಾಚಹಳ್ಳಿ, ಮಾಚಗೋನಹಳ್ಳಿ ಸರ್ಕಲ್, ಹರಿಹರಪುರ ಸೇರಿದಂತೆ ಹಲವು ಕಡೆ ದೇವೇಗೌಡರು ಬಿರುಸಿನ ಪ್ರಚಾರ ನಡೆಸಿದರು. 

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ, ಶಾಸಕ ಡಿ.ಸಿ.ತಮ್ಮಣ್ಣ, ಅಭ್ಯರ್ಥಿ ಬಿ.ಎಲ್.ದೇವರಾಜು, ಹಲವು ಮುಖಂಡರು ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News