ಮಾಸ್ಕ್ ಧರಿಸಿ ಶ್ರೀಗಂಧ ಕಳ್ಳತನಕ್ಕೆ ಯತ್ನ: ಗ್ರಾಮಸ್ಥರ ಕೈಗೆ ಸಿಕ್ಕ ಆರೋಪಿಗೆ ಥಳಿತ, ನಾಲ್ವರು ಪರಾರಿ

Update: 2019-11-29 17:08 GMT

ಚಿಕ್ಕಮಗಳೂರು, ನ.29: ಭೀತಿ ಹುಟ್ಟಿಸುವ ಮಾಸ್ಕ್ ಧರಿಸಿಕೊಂಡು ಶ್ರೀಗಂಧ ಕಳ್ಳತನ ಮಾಡಲು ಆಗಮಿಸಿದ್ದ ಐವರು ಆರೋಪಿಗಳ ಪೈಕಿ ಓರ್ವನನ್ನು ಹಿಡಿದ ಗ್ರಾಮಸ್ಥರು ಆತನನ್ನು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿ ನಂತರ ಪೊಲೀಸರಿಗೆ ಒಪ್ಪಿಸಿರುವ ಘಟನೆ ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಮಧ್ಯರಾತ್ರಿ ವರದಿಯಾಗಿದೆ.

ಮೂಡಿಗೆರೆ ತಾಲೂಕಿನ ಜಿ.ಹೊಸಳ್ಳಿ ಗ್ರಾಮಕ್ಕೆ ಗುರುವಾರ ಮಧ್ಯರಾತ್ರಿ ಐವರು ಶ್ರೀಗಂಧ ಕಳ್ಳರು ಮುಖಕ್ಕೆ ಭಯಹುಟ್ಟಿಸುವ ಮಾಸ್ಕ್ ಧರಿಸಿಕೊಂಡು ಗ್ರಾಮದ ಅಂಚಿನಲ್ಲಿದ್ದ ಐದು ಶ್ರೀಗಂಧದ ಮರಗಳನ್ನು ಕಡಿಯಲು ಆಗಮಿಸಿದ್ದಾರೆ. ಕತ್ತಲಿನಲ್ಲಿ ಶ್ರೀಗಂಧದ ಮರ ಕಡಿಯುತ್ತಿದ್ದ ವೇಳೆ ಎಚ್ಚರಗೊಂಡ ಗ್ರಾಮಸ್ಥರು ಪರಿಶೀಲಿಸಿದಾಗ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಶ್ರೀಗಂಧದ ಮರ ಕಡಿಯುತ್ತಿದ್ದ ದೃಶ್ಯವನ್ನು ಕಂಡಿದ್ದಾರೆ. ಕೂಡಲೇ ಅವರು ಅಕ್ಕಪಕ್ಕದ ನಿವಾಸಿಗಳು ಒಟ್ಟಾಗಿ ಶ್ರೀಗಂಧದ ಚೋರರನ್ನು ಹಿಡಿಯಲು ಮುಂದಾಗಿದ್ದಾರೆ. ಈ ವೇಳೆ ಗ್ರಾಮಸ್ಥರು ತಮ್ಮತ್ತ ಬರುವುದನ್ನು ಅರಿತ ಕಳ್ಳರು ಮುಖವಾಡ ತೋರಿಸುತ್ತಾ ಹೆದರಿಸಲು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ಗ್ರಾಮಸ್ಥರು ಶ್ರೀಗಂಧ ಕದಿಯುತ್ತಿದ್ದವರನ್ನು ಸುತ್ತುವರಿದು ಹಿಡಿಯಲು ಮುಂದಾದಾಗ ನಾಲ್ವರು ಆರೋಪಿಗಳು ತಪ್ಪಿಸಿಕೊಂಡು ಓರ್ವ ಆರೋಪಿ ಗ್ರಾಮಸ್ಥರ ಕೈಗಿ ಸಿಕ್ಕಿಹಾಖಿಕೊಂಡಿದ್ದಾನೆಂದು ತಿಳಿದುಬಂದಿದ್ದು, ಕೈಗೆ ಸಿಕ್ಕ ಓರ್ವನನ್ನು ಗ್ರಾಮಸ್ಥರು ಅಲ್ಲಿಯೇ ಇದ್ದ ಮರವೊಂದಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವೇಳೆ ಆತ ತನ್ನ ಹೆಸರು ಹಾಗೂ ಜತೆಯಲ್ಲಿದ್ದ ನಾಲ್ವರ ಬಗ್ಗೆ ಮಾಹಿತಿ ಹೊರಹಾಕಿದ್ದಾನೆಂದು ತಿಳಿದು ಬಂದಿದೆ.

ಬಳಿಕ ಗ್ರಾಮಸ್ಥರು ಪೊಲೀಸರಿಗೆ ಸುದ್ದಿ ಮುಟ್ಟಿಸಿ ಗ್ರಾಮಸ್ಥರ ಕೈಗೆ ಸಿಕ್ಕಿದ ಆರೋಪಿಯನ್ನು ಮೂಡಿಗೆರೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆಂದು ತಿಳಿದುಬಂದಿದೆ. ಸೆರೆ ಸಿಕ್ಕ ಆರೋಪಿಯನ್ನು ಬೇಲೂರು ತಾಲೂಕಿನ ಅರೇಹಳ್ಳಿ ಗ್ರಾಮದ ನಿವಾಸಿ ರುದ್ರ ಎಂದು ತಿಳಿದು ಬಂದಿದೆ. ಆರೋಪಿಯಿಂದ ಅರಣ್ಯಾಧಿಕಾರಿಗಳು ಒಂದು ಆಪೆ ಆಟೊ, 5 ಶ್ರೀಗಂಧದ ತುಂಡುಗಳು ಹಾಗೂ ಒಂದು ಬೈಕ್ ಅನ್ನು ವಶಕ್ಕೆ ಪಡೆದಿದ್ದು, ಪರಾರಿಯಾಗಿರುವ ನಾಲ್ವರು ಶ್ರೀಗಂಧ ಚೋರರ ಬಂಧನಕ್ಕೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News