ಚಾರ್ಮಾಡಿ ಘಾಟ್: ದಿನದ 24 ಗಂಟೆಯೂ ಲಘು ವಾಹನಗಳ ಸಂಚಾರಕ್ಕೆ ಅನುಮತಿ

Update: 2019-11-29 17:11 GMT

ಚಿಕ್ಕಮಗಳೂರು, ನ.29: ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯ ಪರಿಣಾಮ ಜಿಲ್ಲಾ ವ್ಯಾಪ್ತಿಯ ಚಾರ್ಮಾಡಿ ಘಾಟ್ ಹೆದ್ದಾರಿಯಲ್ಲಿ ಭಾರೀ ಪ್ರಮಾಣದಲ್ಲಿ ಭೂ ಕುಸಿತ ಸಂಭವಿಸಿ ರಸ್ತೆ ಹಾನಿಯಾಗಿತ್ತು. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆಯಾದ ಪರಿಣಾಮ ಜಿಲ್ಲಾಡಳಿತ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಆದರೆ ಇದೀಗ ಜಿಲ್ಲಾಡಳಿತ ಹಿಂದಿನ ನಿರ್ಬಂಧವನ್ನು ಸಡಿಲಿಸಿದ್ದು, ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ದಿನದ 24 ಗಂಟೆಗಳ ಕಾಲವೂ ಅನುಮತಿ ನೀಡಿದೆ.

ರಾಷ್ಟ್ರೀಯ ಹೆದ್ದಾರಿ 73ರ (ಹಳೆಯ ಸಂಖ್ಯೆ-234) ಮಂಗಳೂರು-ವಿಲ್ಲುಪುರಂ ರಸ್ತೆಯ ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯ 86.200 ರಿಂದ 99.200 ಕಿ.ಮೀ (ಕೊಟ್ಟಿಗೆಹಾರ) ವರೆಗಿನ ಚಾರ್ಮಾಡಿ ಘಾಟ್‍ನಲ್ಲಿ ಭಾರೀ ಪ್ರಮಾಣದ ಮಳೆಯಿಂದ ಗುಡ್ಡ ಕುಸಿತ ಹಾಗೂ ಮರಗಳು ರಸ್ತೆಗುರುಳಿದಿದ್ದವು. ಈ ಹಿನ್ನಲೆಯಲ್ಲಿ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರ ನಿರ್ಬಂಧಿಸಲಾಗಿದ್ದು, ಲಘು ವಾಹನಗಳಿಗೆ ಮಾತ್ರ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈ ವಾಹನಗಳ ಸಂಚಾರವನ್ನು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ನಿಗದಿಗೊಳಿಸಿದ್ದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಚಿಕಿತ್ಸೆಗಾಗಿ ರೋಗಿಗಳು ನೆರೆ ಜಿಲ್ಲೆಗೆ ಸಂಚಾರಿಸಬೇಕಾದ ಸಂದರ್ಭದಲ್ಲಿ ಭಾರೀ ಸಮಸ್ಯೆ ಉಂಟಾಗಿತ್ತು.

ಈ ಹಿನ್ನೆಲೆ ಸಾರ್ವಜನಿಕರ ಹಿತದೃಷ್ಟಿಯಿಂದ  ಕೇಂದ್ರ ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989ರ ನಿಯಮ 221(ಎ)(5) ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನ.28ರಿಂದ ಮುಂದಿನ ಆದೇಶದವರೆಗೆ ದಿನದ 24 ಗಂಟೆಗಳ ಕಾಲ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಹಾಗೂ ಎಲ್ಲಾ ರೀತಿಯ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆದೇಶಿಸಿದ್ದಾರೆ. 

ಲಘು ವಾಹನಗಳಾದ ಕಾರು, ಜೀಪು, ಟೆಂಪೋ, ವ್ಯಾನ್, ಎಲ್‍ಸಿವಿ (ಮಿನಿ ವ್ಯಾನ್) ದ್ವಿಚಕ್ರ ವಾಹನಗಳು ಹಾಗೂ ಆಂಬುಲೆನ್ಸ್ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಆದರೆ ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ ಗಳು, ಷಿಪ್ ಕಾರ್ಗೋ ಕಂಟೈನರ್ಸ್ ಹಾಗೂ ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಷಿಯಲ್ ವಾಹನ, ಮಲ್ಟಿ ಎಕ್ಸೆಲ್ ಟ್ರಕ್, ಟ್ರಕ್ ಟ್ರೈಲರ್, ಸಾರ್ವಜನಿಕ ಸಂಚಾರಿಸುವ ಬಸ್ಸುಗಳು, ರಾಜಹಂಸ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಘಾಟ್‍ನಲ್ಲಿ ಲಘು ವಾಹನಗಳ ವೇಗದ ಮಿತಿಯು ಪ್ರತಿ ಗಂಟೆಗೆ 20 ಕಿ.ಮೀ ಮೀರಬಾರದು, ಭೂಕುಸಿತದಿಂದ ರಸ್ತೆಯು ತೀವ್ರತರವಾದ ಧಕ್ಕೆ ಉಂಟಾಗುವ ಹಿನ್ನೆಲೆಯಲ್ಲಿ ಅತ್ಯಂತ ಜಾಗರೂಕತೆಯಿಂದ ಚಾಲನೆ ಮಾಡಬೇಕು. ಅಲ್ಲದೇ ಚಾರ್ಮಾಡಿ ಘಾಟ್‍ನ ಭಾಗದಲ್ಲಿ ಪೋಟೋಗ್ರಫಿ ಅಥವಾ ಸೆಲ್ಫಿ ತೆಗೆಯುವುದು ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News