ಕಳಪೆ ಕಾಮಗಾರಿ ಆರೋಪ: ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ತರಾಟೆಗೆ ತೆಗೆದ ಸೊಗಡು ಶಿವಣ್ಣ
ತುಮಕೂರು, ನ.29: ನಗರದ ಅಶೋಕ ರಸ್ತೆಯಲ್ಲಿ ಸ್ಮಾರ್ಟ್ ಸಿಟಿ ಕೈಗೊಂಡಿರುವ ಕಾಮಗಾರಿ ಕಳಪೆಯಾಗಿದೆ, ಕಾಮಗಾರಿಯನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದೀರಾ ಎಂದು ಸ್ಮಾರ್ಟ್ ಸಿಟಿ ಅಧಿಕಾರಿಗಳನ್ನು ಮಾಜಿ ಸಚಿವ ಸೊಗಡು ಶಿವಣ್ಣ ತರಾಟೆಗೆ ತೆಗೆದುಕೊಂಡಿದ್ದಾರೆ.
ಸ್ಮಾರ್ಟ್ ಸಿಟಿ ಇಂಜಿನಿಯರ್ ಗಳಾದ ಶಿವಕುಮಾರ್ ಹಾಗೂ ಮಧು ಅವರನ್ನು ಸ್ಥಳಕ್ಕೆ ಕರೆಸಿದ ಸೊಗಡು ಶಿವಣ್ಣ ಅವರು ಕಾಮಗಾರಿಗಳ ಗುಣಮಟ್ಟದ ಬಗ್ಗೆ ತರಾಟೆ ತೆಗೆದುಕೊಳ್ಳುತ್ತಿದ್ದಂತೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು ತಬ್ಬಿಬ್ಬಾದರು. ರಾತ್ರಿ ವೇಳೆ ಕಾಮಗಾರಿ ಮಾಡುವಾಗ ಅಧಿಕಾರಿಗಳು ಎಲ್ಲಿರುತ್ತಾರೆ ? ಕಣ್ಮುಂಚಿಕೊಂಡು ಕುಳಿತಿದ್ದೀರಾ? ಜನರ ಹಣಕ್ಕೆ ಹೊಣೆಯಾರು ಎಂದು ಪ್ರಶ್ನಿಸಿದರು.
ಅಶೋಕ ರಸ್ತೆಯಲ್ಲಿ ಅಳವಡಿಸುತ್ತಿರುವ ಸ್ಲ್ಯಾಬ್ ಗಳ ಗುಣಮಟ್ಟ ಹೇಗಿದೆ ಎಂದರೆ ಮುಟ್ಟಿದರೆ ಮುರಿದು ಹೋಗುವಂತಿದೆ ಎಂದು ಸ್ಲ್ಯಾಬ್ ಗುಣಮಟ್ಟದ ಬಗ್ಗೆ ಹೇಳಿದ ಅವರು, ರಾತ್ರಿ ವೇಳೆಯಲ್ಲಿ ಅಧಿಕಾರಿಗಳು ಇಲ್ಲದೇ ಇದ್ದಾಗ ಕಾಂಕ್ರೀಟ್ ಮಿಶ್ರಣವನ್ನು ಮಾಡಲಾಗುತ್ತಿದೆ. ಒಂದೇ ದಿನದಲ್ಲಿ ಕ್ಯೂರಿಂಗ್ ಮಾಡಿ ಸ್ಲ್ಯಾಬ್‍ಗಳನ್ನು ಮುಚ್ಚಲಾಗುತ್ತಿದೆ. 1500 ಕೋಟಿ ಕಾಮಗಾರಿಯನ್ನು ನಿರ್ವಹಿಸುವುದು ಹೀಗೇಯೇ ? ಸ್ಮಾರ್ಟ್‍ಸಿಟಿ ಸೂಪರಿಡೆಂಟ್ ಇಂಜನಿಯರ್ ಆಗಲಿ, ಬೇರೆ ಅಧಿಕಾರಿಗಳು ಯಾರಾದರೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಆರೋಪಿಸಿದರು.
ನಗರದಲ್ಲಿ ಸ್ಮಾರ್ಟ್‍ಸಿಟಿಯಿಂದ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಿಂದ ಕೂಡಿದ್ದು, ಸ್ಮಾರ್ಟ್‍ಸಿಟಿ ಅಧ್ಯಕ್ಷೆ ಶಾಲಿನಿ ರಜನೀಶ್ ಅವರನ್ನು ಅಮಾನತುಗೊಳಿಸಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ ಅವರು, ಕಳಪೆ ಕಾಮಗಾರಿ ಮಾಡುತ್ತಿದ್ದರೆ ನೋಡುತ್ತಾ ಕುಳಿತುಕೊಳ್ಳುವುದಿಲ್ಲ. ಏನಾದರೂ ಆಗಲಿ ಕಳಪೆ ಕಾಮಗಾರಿ ಮಾಡುವವರಿಗೆ ಹೊಡೆಯುತ್ತೇನೆ, ಕಾನೂನು ಉಲ್ಲಂಘಿಸಿದರೂ ಪರವಾಗಿಲ್ಲ ಎಂದು ಎಚ್ಚರಿಕೆ ನೀಡಿದರು.
20 ವರ್ಷ ಅಧಿಕಾರವನ್ನು ಜನರು ನೀಡಿದ್ದಾರೆ. ನನ್ನ ಶ್ರಮದಿಂದಲೇ ಇಂದು ನಗರಕ್ಕೆ ಸ್ಮಾರ್ಟ್‍ಸಿಟಿ ಮಂಜೂರಾಗಿದೆ. 1500 ಕೋಟಿಯಲ್ಲಿ ನಗರವನ್ನು ಅತ್ಯಾಧುನಿಕವಾಗಿ ನಿರ್ಮಾಣ ಮಾಡಬಹುದು. ಆದರೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದಾಗಿ ಕಾಮಗಾರಿ ಕಳಪೆಯಾಗುತ್ತಿದೆ. ಜನರಿಗೆ ತೊಂದರೆಯಾಗಲು ಬಿಡುವುದಿಲ್ಲ. ಶಾಲಿನಿಯನ್ನು ಅಮಾನತುಗೊಳಿಸಿ. ತನಿಖೆ ನಡೆಸದೇ ಇದ್ದರೆ ಜೈಲ್‍ಭರೋ ಚಳವಳಿ ಹಮ್ಮಿಕೊಳ್ಳುತ್ತೇನೆ.. ಜೈಲೇನು ನನಗೆ ಹೊಸದಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಬೆಸ್ಕಾಂ, ಪಾಲಿಕೆ, ಸ್ಮಾರ್ಟ್‍ಸಿಟಿ, ಪೊಲೀಸ್ ಹೀಗೆ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದ ಕಾರಣದಿಂದಾಗಿ ಜನರು ತೊಂದರೆಪಡುತ್ತಿದ್ದಾರೆ. ಪದೇ ಪದೇ ರಸ್ತೆಯನ್ನು ಅಗೆದು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.