ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿವಾದ: ಕನ್ನಡ, ಸಂಸ್ಕೃತಿ ಇಲಾಖೆಗೆ ಮನವಿ ಸಲ್ಲಿಸಲು ಹೈಕೋರ್ಟ್ ಆದೇಶ

Update: 2019-11-29 18:02 GMT

ಬೆಂಗಳೂರು, ನ.29: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿಚಾರದಲ್ಲಿ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ನೀಡಿದ್ದ ಶಿಫಾರಸಿನಂತೆ ಮಾನದಂಡಗಳನ್ನು ರೂಪಿಸಿಲ್ಲ ಎಂದು ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಪತ್ರ ಸಲ್ಲಿಸಲು ಸಲ್ಲಿಸಲು ಆದೇಶಿಸಿದೆ.

ಬೆಂಗಳೂರಿನ ವಿಜಯನಗರದ ನಿವಾಸಿ ಕೇಶವ ಗೋಪಾಲ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ, ರಾಜಕೀಯ ಪಕ್ಷಕ್ಕೆ ಸೇರಿದವರನ್ನು ರಾಜ್ಯೋತ್ಸವ ಪ್ರಶಸ್ತಿ ಪರಿಶೀಲನಾ ಸಮಿತಿಯ ಸದಸ್ಯರನ್ನಾಗಿ ನಿಯೋಜಿಸಬಾರದು. ಪ್ರಶಸ್ತಿ ಆಯ್ಕೆಯಲ್ಲಿ ನಿಯಮಗಳನ್ನು ಪಾಲನೆ ಮಾಡಿಲ್ಲ ಎಂಬ ಬಗ್ಗೆ ಅರ್ಜಿದಾರರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಮನವಿ ಪತ್ರ ಸಲ್ಲಿಸಲು ಆದೇಶಿಸಿ, ಅರ್ಜಿಯನ್ನು ಇತ್ಯರ್ಥಪಡಿಸಿತು. ಪ್ರಶಸ್ತಿ ಪರಿಶೀಲನಾ ಸಮಿತಿ ಸದಸ್ಯರಾಗಿದ್ದ ನಿರುಪಮಾ ರಾಜೇಂದ್ರನ್ ಅವರು, ತಾವು ಸ್ಥಾಪಿಸಿದ್ದ ಪ್ರಭಾತ್ ಆರ್ಟ್ಸ್ ಇಂಟರ್ ನ್ಯಾಷನಲ್‌ಗೆ ಪ್ರಶಸ್ತಿ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಈ ಕುರಿತು ಅವರೇ ನೀಡಿರುವ ಹೇಳಿಕೆಗಳ ಕುರಿತ ವರದಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇನ್ನು ಉದ್ಯಮಿಯಾದ ಕೆ.ಪ್ರಕಾಶ್ ಶೆಟ್ಟಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಅವರ ಆಪ್ತರಾಗಿದ್ದಾರೆ. ಡಾ.ವಿಜಯ ಸಂಕೇಶ್ವರ್ ಅವರು ಬಿಜೆಪಿಗೆ ಸೇರಿದವರು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು. ಹೀಗಾಗಿ ಉದ್ಯಮಿಗಳಾದ ಕೆ.ಪ್ರಕಾಶ್ ಶೆಟ್ಟಿ, ಡಾ.ವಿಜಯ್ ಸಂಕೇಶ್ವರ್ ಮತ್ತು ಪ್ರಭಾತ್ ಆಟ್ಸ್ ಇಂಟರ್ ನ್ಯಾಷನಲ್ ಸಂಸ್ಥೆಗೆ ಪ್ರಸ್ತಕ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡುವುದನ್ನು ತಡೆ ಹಿಡಿಯಬೇಕು. ಪ್ರಶಸ್ತಿ ಆಯ್ಕೆ ಪರಿಶೀಲನಾ ಸಮಿತಿಯಲ್ಲಿದ್ದ ಬಹುತೇಕ ಸದಸ್ಯರು ಆಡಳಿತಾರೂಢ ಬಿಜೆಪಿಗೆ ಸೇರಿದವರಾಗಿದ್ದಾರೆ. ಅಲ್ಲದೆ, ಅರ್ಜಿದಾರರ ಹೆಸರನ್ನು ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News