ದೇಶದಲ್ಲಿ ಸಮಾನ ಶಿಕ್ಷಣ ಜಾರಿಗೆ ಬರಬೇಕು: ಬರಗೂರು ರಾಮಚಂದ್ರಪ್ಪ

Update: 2019-11-29 18:15 GMT

ಹಾಸನ, ನ.29: ದೇಶದಲ್ಲಿ ಮಕ್ಕಳಿಗೆ ಸಮಾನ ಶಿಕ್ಷಣ ಜಾರಿಗೆ ಬರಬೇಕು. ಇಲ್ಲವಾದರೆ ಹಸುಗೂಸಿನ ಮಧ್ಯೆ ಅಸಮಾನತೆಯನ್ನು ಬಿತ್ತಿದಂತೆ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. 

ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸಮಸ್ತರು ಸಮಾನರು ಎಂಬ ಪ್ರಜಾಸತಾತ್ಮಕ ಮೌಲ್ಯಕ್ಕೆ ಬೇಕಾಗಿರುವ ಪ್ರೇರಣೆಯನ್ನು ಸ್ವಾಮೀಜಿಯವರು ಕೊಡುತ್ತಿರುತ್ತಾರೆ. ಇದು ಮಕ್ಕಳ ಸಾಹಿತ್ಯ ಸಮ್ಮೇಳನ. ದೊಡ್ಡವರ ಸಮ್ಮೇಳನವಾಗಿರಲಿ, ಮಕ್ಕಳ ಸಾಹಿತ್ಯ ಸಮ್ಮೇಳನವಾಗಿರಲಿ ಸಾಹಿತ್ಯ ಎಂಬುದಕ್ಕೆ ಒಂದು ವಿಶಿಷ್ಟವಾದ ನೆಲೆ ಇದೆ. ಸಾಹಿತ್ಯವನ್ನು ದೊಡ್ಡವರು ಮತ್ತು ಚಿಕ್ಕವರು ಇಬ್ಬರೂ ಬರೆಯುತ್ತಾರೆ. ಎರಡಕ್ಕೂ ಇರುವ ವ್ಯತ್ಯಾಸವನ್ನು ನೋಡಿದರೆ ಮಕ್ಕಳು ಮುಗ್ಧ ಅನುಭವವನ್ನು ಸಾಹಿತ್ಯದ ಮೂಲಕ ಅನಾವರಣ ಮಾಡುತ್ತಾ ಹೋಗುತ್ತಾರೆ. ಕುವೆಂಪುವರು ಹೇಳುವಾಗೆ ಮಗು ಹುಟ್ಟುವುದೇ ವಿಶ್ವಮಾನವ ರೂಪಕ. ಎಲ್ಲಾ ದೊಡ್ಡವರ ಮನಸ್ಸಿನ ಒಳಗೆ ಒಂದು ಮಗು ಹುಟ್ಟುತ್ತಾ ಹೋಗುತ್ತದೆ ಎಂದರು.

ಇಂದು ಶಿಕ್ಷಣ ಕ್ಷೇತ್ರದಲ್ಲೂ ಸಹ ಮಕ್ಕಳು ಹೆಚ್ಚಾಗುತ್ತಿದ್ದಾರೆ. ಆದರೆ ಪಾಠ ಹೇಳುವ ಮೇಸ್ಟ್ರು ಕಡಿಮೆಯಾಗುತ್ತಿದ್ದಾರೆ. ಮೇಸ್ಟ್ರು ಎನ್ನುವ ಪದಕ್ಕೆ ಗೌರವ ಮತ್ತು ಮೌಲ್ಯವೇ ಬೇರೆಯಿದೆ ಎಂದು ತಮ್ಮ ಹಿಂದಿನ ನೆನಪನ್ನು ನೆನಪಿಸಿದರು.

ಮಕ್ಕಳ ಅಭ್ಯುದಯಕ್ಕಾಗಿ ಸಮಾನ ಶಿಕ್ಷಣ ನೀತಿಯೊಂದನ್ನು ರೂಪಿಸಿ ಜಾರಿಗೆ ತರಬೇಕು. ಹಸುಗೂಸಿನ ಮಧ್ಯೆ ಅಸಮಾನತೆಯನ್ನು ಬಿತ್ತಬಾರದು. ಒಂದೇ ವಯಸ್ಸಿನ ಮಕ್ಕಳು ಎಲ್.ಕೆ.ಜಿ ಮತ್ತು ಯುಕೆಜಿಗೆ ಹೋದರೆ ಇನ್ನೊಂದು ಕಡೆ ಅದೇ ವಯಸ್ಸಿನ ಮಕ್ಕಳು ಅಂಗನವಾಡಿಗೆ ಹೋಗುತ್ತಿರುವ ಸ್ಥಿತಿಯನ್ನು ಪರಿಹಾರ ಮಾಡುವ ಬಗ್ಗೆ ಗಮನಕೊಡಬೇಕಾಗಿದೆ ಎಂದರು. ಸಮಾನ ಶಾಲಾ ಶಿಕ್ಷಣ ಎಂಬುದು ಈ ದೇಶದಲ್ಲಿ ಜಾರಿಗೆ ಬರದಿದ್ದರೆ ಯಾವ ಮಕ್ಕಳನ್ನು ದೊಡ್ಡವರು, ಅವರ ಮನಸ್ಸನ್ನು ದೊಡ್ಡದು ಎಂದು ಕರೆಯುತ್ತೇವೆ. ಅಂತಹ ಮಕ್ಕಳಲ್ಲಿ ಅಸಮಾನತೆಯ ಬೀಜವನ್ನು ಮತ್ತು ತಾರತಮ್ಯವನ್ನು ಮಾಡುತ್ತಿದ್ದೇವೆ. ಕಡೆ ಪಕ್ಷ ಶಾಲಾ ಶಿಕ್ಷಣವಾದರೂ ಸಮನಾಗಿ ಇದ್ದರೆ ಮಾತ್ರ ನಿಜವಾದ ಮಾನವಿಯ ಶಿಕ್ಷಣ ಎಂದು ಎಚ್ಚರಿಸಿದರು. 

ಈ ದೇಶದಲ್ಲಿ ಪ್ರತಿ ವರ್ಷ 3 ಲಕ್ಷದ 9 ಸಾವಿರ ಮಕ್ಕಳು ಹುಟ್ಟಿದ ತಕ್ಷಣ ಸಾಯುತ್ತಿದ್ದಾರೆ. ಅಂದರೆ 3 ಮಕ್ಕಳು ಹುಟ್ಟಿದರೆ ಒಂದು ಮಗು ಸಾಯುತ್ತಿದೆ. ಭ್ರೂಣಹತ್ಯೆ ಮಾಡುವುದರಲ್ಲಿ ಇಡೀ ವಿಶ್ವದಲ್ಲಿಯೇ ಭಾರತ ಮೊದಲಿದೆ ಎಂದು ಬೇಸರ ವ್ಯಕ್ತಪಡಿಸಿದರು. 

ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಮಾತನಾಡಿ, ಕುವೆಂಪು ಕಾಲದಿಂದ ಇಲ್ಲಿ ತನಕ ಹಲವು ಕನ್ನಡ ಜಾತ್ರೆಗಳು ನಡೆದಿವೆ. ಆದರೂ ಕನ್ನಡ ಭಾಷೆ, ಸಾಹಿತ್ಯ ಕುಂಟುತ್ತಾ ಸಾಗುತ್ತಿದೆ. ಎಳೆಯ ಮನಸ್ಸಿನಲ್ಲಿ ಸಾಹಿತ್ಯ ಚಿಂತನೆ ಮೂಡಿದರೆ ಸೊರಗುತ್ತಾ ಸಾಗಿರುವ ಕನ್ನಡ ಭಾಷೆ ಮತ್ತೇ ಸಮೃದ್ಧವಾಗುತ್ತದೆ ಎಂದು ಹೇಳಿದರು.

ಸಮ್ಮೇಳನ ಸರ್ವಾಧ್ಯಕ್ಷರಾದ ಕೀರ್ತನ ನಾಯಕ್ ಅವರು ಮಾತನಾಡಿ, ಮಕ್ಕಳಿಗೇಕಿಲ್ಲ ಸಾಹಿತ್ಯ ಸಮ್ಮೇಳನಗಳು ಎಂಬ ಒಕ್ಕೊರಲ ಕೂಗಿನಿಂದ ಈ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮೂಡಿದೆ ಎಂದು ಹೇಳಿದರು.

ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಯುವ ಕವಿಗಳ ಕವನ ಸಂಕಲನಗಳನ್ನು ನಿರ್ಮಲಾನಂದನಾಥ ಸ್ವಾಮೀಜಿ, ಬರಗೂರು ರಾಮಚಂದ್ರಪ್ಪ ಹಾಗೂ ಸಮ್ಮೇಳನಾಧ್ಯಕ್ಷರು ಬಿಡುಗಡೆ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಎಂ.ಎ. ಗೋಪಾಲಸ್ವಾಮಿ, ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಹಾಸನ ಶಾಖಾಮಠದ ಮಹಾ ಪೋಷಕರು ಹಾಗೂ ಕಾರ್ಯದರ್ಶಿಯಾದ ಶ್ರೀ ಶಂಭುನಾಥ ಸ್ವಾಮೀಜಿ, ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಜ್ಯಾಧ್ಯಕ್ಷ ಸಿ.ಎನ್.ಅಶೋಕ್, ಸಾ.ಶಿ.ಇ.ಯ ಉಪನಿರ್ದೇಶಕರಾದ ಪ್ರಕಾಶ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಬಿ.ಆರ್.ಉದಯ್ ಕುಮಾರ್, ಮಕ್ಕಳ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸುರೇಶ್ ಗುರೂಜೀ, ಶಿಕ್ಷಣಾಧಿಕಾರಿ ರುದ್ರೇಶ್, ಜಿ.ಸಾ.ಪ. ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಸಮ್ಮೇಳನದ ಸಹ ಅಧ್ಯಕ್ಷರಾದ ರೇವಂತ್ ರಾಜೀವ್, ಪ್ರದ್ಯುಮ್ನ ಮೂರ್ತಿ, ಅಭಿಷೇಕ್ ಉಭಾಳೆ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News