ಲಂಡನ್‌ನಲ್ಲಿ ಉಗ್ರರ ದಾಳಿ : ಮೂವರು ಮೃತ್ಯು

Update: 2019-11-30 03:42 GMT

ಲಂಡನ್ : ಭಯೋತ್ಪಾದನೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯೊಬ್ಬ ಶುಕ್ರವಾರ ಮಧ್ಯಾಹ್ನ ಜನನಿಬಿಡ ಪ್ರದೇಶದಲ್ಲಿ ಚೂರಿಯಿಂದ ಇರಿದು ಇಬ್ಬರನ್ನು ಹತ್ಯೆಗೈದಿದ್ದು, ದಾಳಿಕೋರ ಕೂಡಾ ಹತ್ಯೆಗೀಡಾಗಿದ್ದಾನೆ.

ಲಂಡನ್ ಬ್ರಿಡ್ಜ್‌ನಲ್ಲಿ 2017ರ ಜೂನ್‌ನಲ್ಲಿ ನಡೆದ ಉಗ್ರರ ದಾಳಿ ಘಟನೆಯನ್ನು ನೆನಪಿಸುವ ಈ ದಾಳಿ ಡಿಸೆಂಬರ್ 12ರಂದು ನಡೆಯುವ ಚುನಾವಣೆಯ ಪ್ರಚಾರದ ವೇಗ ತಗ್ಗಿಸಿದೆ.

ಶಂಕಿತ ಉಗ್ರನನ್ನು ಸಾರ್ವಜನಿಕರು ಸೆರೆ ಹಿಡಿಯುವ ಮುನ್ನ ಆತ ಬೇಕಾಬಿಟ್ಟಿ ಜನರ ಮೇಲೆ ದಾಳಿ ಮಾಡಲಾರಂಭಿಸಿದ. ಬಳಿಕ ಪೊಲೀಸರು ಐದು ನಿಮಿಷಗಳಲ್ಲಿ ಹಂತಕನನ್ನು ಸಾಯಿಸಿದರು. ಮೂರು ಮಂದಿ ಘಟನೆಯಲ್ಲಿ ಗಾಯಗೊಂಡಿದ್ದು, ಈ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕ ಎನ್ನಲಾಗಿದೆ. ಎರಡನೇ ವ್ಯಕ್ತಿಯ ಆರೋಗ್ಯ ಸ್ಥಿರವಾಗಿದ್ದು, ಮೂರನೇ ವ್ಯಕ್ತಿಗೆ ಅಂಥ ಗಂಭೀರ ಗಾಯಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ಚುನಾವಣಾ ಪ್ರಚಾರವನ್ನು ಮೊಟಕುಗೊಳಿಸಿ ಪ್ರಧಾನಿ ಬೋರಿಸ್ ಜಾನ್ಸನ್ ಸ್ಥಳಕ್ಕೆ ಧಾವಿಸಿದರು. ಮೃತರ ಗೌರವಾರ್ಥವಾಗಿ ಇತರ ಪಕ್ಷಗಳು ಕೂಡಾ ಚುನಾವಣಾ ಪ್ರಚಾರ ಸ್ಥಗಿತಗೊಳಿಸಿವೆ.

ಗಂಭೀರ ಹಾಗೂ ಹಿಂಸಾತ್ಮಕ ಅಪರಾಧಿಗಳನ್ನು ಜೈಲಿನಿಂದ ಅವಧಿಪೂರ್ವವಾಗಿಯೇ ಹೊರಬಿಡುವ ಕ್ರಮವನ್ನು ಜಾನ್ಸನ್ ಹಿಂದಿನಿಂದಲೂ ವಿರೋಧಿಸುತ್ತಾ ಬಂದಿದ್ದರು. ಈ ಘಟನೆ ಲಂಡನ್ ಜನಜೀವನವನ್ನು ಅಲ್ಲೋಲ ಕಲ್ಲೋಲಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News