'ಎಂತಹ ವಿಕೃತ ಮನಸ್ಸು': ಮೂವರು ಅತ್ಯಾಚಾರಿಗಳನ್ನು 'ಮರೆತ' ಸೂಲಿಬೆಲೆಗೆ 'ಛೀ', 'ಥೂ' ಎಂದ ಟ್ವಿಟರಿಗರು

Update: 2019-11-30 09:43 GMT

ಮಂಗಳೂರು: ದೇಶವನ್ನೇ ಬೆಚ್ಚಿಬೀಳಿಸಿರುವ ತೆಲಂಗಾಣ ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಜನರು ನಾಲ್ವರು ದುಷ್ಕರ್ಮಿಗಳನ್ನು ಗಲ್ಲಿಗೇರಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಈ ನಡುವೆ ಈ ಪ್ರಕರಣದಲ್ಲೂ ಆರೋಪಿಯೊಬ್ಬನ ಧರ್ಮದ ವಿಚಾರವನ್ನೆತ್ತಿ ಕೋಮು ದ್ವೇಷದ ಬೇಳೆ ಬೇಯಿಸುವ ಕೆಲಸವನ್ನು ಕೆಲ ದುಷ್ಕರ್ಮಿಗಳು ನಡೆಸುತ್ತಿದ್ದಾರೆ. ತೆಲಂಗಾಣ ಘಟನೆಗೆ ಸಂಬಂಧಿಸಿ ಒಬ್ಬ ಆರೋಪಿಯ ಹೆಸರನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಇದೀಗ ಟ್ವಿಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಜನರು ಛೀಮಾರಿ ಹಾಕುತ್ತಿದ್ದಾರೆ.

ತೆಲಂಗಾಣ ಘಟನೆಗೆ ಸಂಬಂಧಿಸಿ ಟ್ವೀಟ್ ಮಾಡಿದ್ದ ಚಕ್ರವರ್ತಿ ಸೂಲಿಬೆಲೆ 'ನನ್ನ ಹೆಸರು ಮುಹಮ್ಮದ್, ನಾನೊಬ್ಬ ಅತ್ಯಾಚಾರಿ' ಎನ್ನುವ ಬರಹವುಳ್ಳ ಫೋಟೊವೊಂದನ್ನು ಪೋಸ್ಟ್ ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಭಾಗಿಯಾಗಿದ್ದ ನವೀನ್, ಶಿವ ಮತ್ತು ಕೇಶವ ಎಂಬವರ ಹೆಸರುಗಳ ಉಲ್ಲೇಖ ಸೂಲಿಬೆಲೆ ಟ್ವೀಟ್ ನಲ್ಲಿರಲಿಲ್ಲ. ಅತ್ಯಾಚಾರಿಗಳಲ್ಲೂ ಧರ್ಮವನ್ನು ನೋಡುವ ಮತ್ತು ಕೆಲವರ ಬಗ್ಗೆ ಮೃಧು ಧೋರಣೆ ವಹಿಸಿದ್ದಾರೆ ಎಂದು ಟ್ವಿಟರಿಗರು ಈ ಟ್ವೀಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಉಳಿದ ಮೂವರು ಆರೋಪಿಗಳು - ನವೀನ್, ಕೇಶವುಲು, ಶಿವ ಇವರನ್ನು ಬಿಟ್ಟು ಬಿಡಬೇಕಾ?, ಇಂತಹ ಒಂದು ದುರ್ಘಟನೆಯಲ್ಲೂ ಎಂತಹ ವಿಕೃತ ಮನಸ್ಸು. ಉಳಿದವರಿಗೆ ಮಾದರಿಯಾಗಬೇಕಾದ ನೀವೇ ಹೀಗಾದರೆ ಹೇಗೆ?" ಎಂದು ಸತ್ಯ ಹೊಳ್ಳ ಎಂಬವರು ಪ್ರತಿಕ್ರಿಯಿಸಿದ್ದಾರೆ.

"ಇನ್ನು ಉಳಿದ ಮೂರು ಜನ ನಿನ್ನ ಸಂಬಧಿಕರು ಏನಪ್ಪಾ ಡೋಂಗಿ ಗೋಡ್ಸೆ ಗುಲಾಮ, ಅವರಿಗೆ ನಿನ್ನ ಗ್ಯಾಂಗ್ ಅಲ್ಲಿ ಮೋರಿ clean ಮಾಡೋಕೆ ಇಟ್ಕೊಳ್ಳೋ ಪ್ಲಾನ್" ಎಂದು ಎಂದು Ricky007 ಎಂಬವರು ಟ್ವೀಟ್ ಮಾಡಿದ್ದಾರೆ.

"ವಿಜಯಪುರ ದಾನಮ್ಮಳ ಅತ್ಯಾಚಾರ ಪ್ರಕರಣದ ಆರೋಪಿ ನಿಮ್ಮ ಸಂಘಟನೆ ಕಾರ್ಯಕರ್ತರು ಅದಕ್ಕೆ ಅವತ್ತು ನಿವು ಸುಮ್ಮನೆ ಇದು ಇವರ ಬೇರೆ ಜಾತಿ ಹುಡುಗರು ಅಂದರೆ ಮಾತ್ರ ಕರಳು ಕಿತ್ತು ಬರುತ್ತದೆ ಅಲ್ಲ" ಎಂದು ನಾಗರಾಜ್ ಸಜ್ಜನ್, " ಯಾಕೆ ಸ್ವಾಮಿ ಇಂತ ಕೆಟ್ಟ ಕ್ರೈಮ್ ನಲ್ಲು ನಿಮ್ಮ ಅಜೆಂಡಾ ತೋರಿಸ್ತೀರ. ಛೇ" ಎಂದು ಅಮರನಾಥ್ ಶಿವಶಂಕರ್, "ಉಳಿದ ಮೂವರು ಅವನ ಕುಟುಂಬಸ್ಥರು...." ಎಂದು ಪ್ರದೀಪ್ ಶೆಟ್ಟಿ, " ಹನೀಫ್ ಅವರು ಒಮ್ಮೆ ಸ್ಟೇಜಿನಲ್ಲಿಯೇ ತಮಗೆ ವಾದದ ಮಂಗಳಾರತಿ ಮಾಡಿದ್ರು. ಆದ್ರೂ ಬುದ್ದಿ ಬಂದಿಲ್ವಲ್ಲ ಸೂಲಿಬೆಲೆಯವರೇ?! ಯಾವಾಗ ನೀವು ಮನುಷ್ಯರಾಗೋದು?" ಎಂದು ಶ್ರೀನಿವಾಸ್ ಕಾರ್ಕಳ, " ಥೂ ನೀಚ, ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನ ಗಲ್ಲಿಗೇರಿಸಿ ಎನ್ನುವುದು ಬಿಟ್ಟು, ಇಲ್ಲಿ ಕೂಡ ಧರ್ಮದ ಹೆಸರಿನಲ್ಲಿ ತಾರತಮ್ಯ ಮಾಡುವ ನಿನ್ನ ನಕಲಿ ದೇಶ ಪ್ರೇಮ, ನಕಲಿ ಹಿಂದುತ್ವ ಎದ್ದು ಕಾಣುತ್ತದೆ.." ಎಂದು ಪ್ರದೀಪ್ ಎನ್.ಕೆ. ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News