ಸಿದ್ದರಾಮಯ್ಯ ಕಾಲಿಟ್ಟ ಪಕ್ಷಗಳೆಲ್ಲವೂ ಛಿದ್ರವಾಗುತ್ತವೆ: ಸಚಿವ ಈಶ್ವರಪ್ಪ

Update: 2019-11-30 12:12 GMT

ಬೆಂಗಳೂರು, ನ.30: ಉಪ ಚುನಾವಣೆಯಲ್ಲಿ ಮತದಾರರು ಸುಭದ್ರ ಸರಕಾರಕ್ಕೆ, ಅಭಿವೃದ್ಧಿ ಪರ ಸರಕಾರಕ್ಕೆ ಮತ ನೀಡುತ್ತಾರೆ. ಅಭದ್ರ ಸರಕಾರಕ್ಕೆ ಬೆಂಬಲ ನೀಡುವುದಿಲ್ಲ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳನ್ನು ಮತದಾರರು ಸಾರಾಸಗಟಾಗಿ ತಿರಸ್ಕರಿಸುತ್ತಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ಶನಿವಾರ ನಗರದ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರಕಾರ ಬೀಳಲು ಕುಮಾರಸ್ವಾಮಿ, ಸಿದ್ದರಾಮಯ್ಯ ಕಾರಣ. ಆದರೂ ಇಬ್ಬರೂ ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಉಪ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಎನ್ನುವುದಕ್ಕಿಂತ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಚುನಾವಣೆ ನಂತರ ಇಬ್ಬರೂ ನಿರುದ್ಯೋಗಿಗಳಾಗುತ್ತಾರೆ. ಚುನಾವಣಾ ಪ್ರಚಾರದಲ್ಲಿ ಸಿದ್ದರಾಮಯ್ಯ ಒಬ್ಬಂಟಿಯಾಗಿದ್ದಾರೆ. ಜಾರ್ಜ್, ಕೆ.ಎಚ್.ಮುನಿಯಪ್ಪ, ಇಬ್ರಾಹೀಂ, ಪರಮೇಶ್ವರ್ ಸೇರಿದಂತೆ ಯಾರೊಬ್ಬರೂ ಅವರೊಂದಿಗಿಲ್ಲ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಪಕ್ಷದ ಎಲ್ಲ ನಾಯಕರು ಏಕಶಿಲೆಯಂತೆ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಮತದಾರರು ನಿರೀಕ್ಷೆಗೆ ಮೀರಿ ಬೆಂಬಲ ನೀಡುತ್ತಿದ್ದಾರೆ. ಇದು, ಕಾಂಗ್ರೆಸ್- ಜೆಡಿಎಸ್‌ಗೆ ನುಂಗಲಾರದ ತುತ್ತಾಗಿದೆ ಎಂದು ಈಶ್ವರಪ್ಪ ಹೇಳಿದರು.

ಬಿಜೆಪಿ ಎಲ್ಲ 15 ಕ್ಷೇತ್ರಗಳಲ್ಲಿ ಗೆಲ್ಲಲಿದೆ. ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಅಂತರದಿಂದ ಗೆಲ್ಲಲು ಎಲ್ಲ ಕ್ಷೇತ್ರಗಳಲ್ಲಿ ಡಿ.1ರಂದು ಮಹಾಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದಲ್ಲಿ ಕಾರ್ಯಕರ್ತರು ಮನೆ-ಮನೆಗೆ ತೆರಳಿ ಪ್ರಚಾರ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಸಿದ್ದರಾಮಯ್ಯ ಹೋದ ಕಡೆಯಲ್ಲ ಬಾಯಿಗೆ ಬಂದದ್ದು ಮಾತನಾಡುತ್ತಿದ್ದಾರೆ. ಅವರು ಕಾಲಿಟ್ಟ ಪಕ್ಷಗೆಳಲ್ಲವೂ ಛಿದ್ರವಾಗುತ್ತವೆ. ಯಾವ ಪಕ್ಷಕ್ಕೆ ಹೋದರೂ ಕೆಟ್ಟ ರಾಜಕೀಯ ಮಾಡುತ್ತಾರೆ. ಜಾತಿ, ಧರ್ಮಗಳ ನಡುವೆ ಒಡಕು ಮೂಡಿಸಲು ಪ್ರಯತ್ನಿಸುತ್ತಾರೆ. ದಲಿತ, ಕುರುಬ ಸೇರಿದಂತೆ ಯಾವುದೇ ಸಮುದಾಯದ ನಾಯಕರು ಅವರೊಂದಿಗಿಲ್ಲ. ಅಲ್ಪಸಂಖ್ಯಾತರು ಬೆಂಬಲ ನೀಡುತ್ತಿಲ್ಲ ಎಂದು ಅವರು ಹೇಳಿದರು.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಾರೆ. ರಾಜೀನಾಮೆ ನೀಡಿದ ಶಾಸಕರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಆದರೆ, ರಮೇಶ್ ಕುಮಾರ್ ನಂ.1 ಪಕ್ಷ ದ್ರೋಹಿಯಾಗಿದ್ದಾರೆ. ತಮ್ಮ ಪಕ್ಷದವರೇ ಆದ ಕೆ.ಎಚ್.ಮುನಿಯಪ್ಪ ಸೋಲಿಗೆ ಕಾರಣರಾಗಿದ್ದಾರೆ. ಸಿದ್ದರಾಮಯ್ಯ ಮತ್ತು ರಮೇಶ್ ಕುಮಾರ್ ಇಬ್ಬರೂ ಪಕ್ಷ ದ್ರೋಹಿಗಳಾಗಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದರು.

ಖರ್ಗೆ ರಾಜಕೀಯ ಭವಿಷ್ಯ ಅಂತ್ಯಗೊಳಿಸುವ ತಂತ್ರ

ಮಲ್ಲಿಕಾರ್ಜುನ ಖರ್ಗೆಯನ್ನು ರಾಜ್ಯಸಭೆಗೆ ನಿಲ್ಲಿಸುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಅಗತ್ಯ ಸಂಖ್ಯೆಯ ಶಾಸಕರ ಕೊರತೆ ಇದ್ದರೂ ಖರ್ಗೆ ಅವರನ್ನು ನಿಲ್ಲಿಸುವ ಹುನ್ನಾರವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. ಈ ಮೂಲಕ ಖರ್ಗೆ ಅವರ ರಾಜಕೀಯ ಭವಿಷ್ಯ ಅಂತ್ಯಗೊಳಿಸುವುದು ಅವರ ತಂತ್ರವಾಗಿದೆ.

-ಕೆ.ಎಸ್.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News