'ಶಾಸಕರನ್ನು ಪ್ರಾಣಿಗಳ ರೀತಿ...': ಬಿಜೆಪಿ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

Update: 2019-11-30 12:24 GMT

ಬೆಳಗಾವಿ, ನ.30: ನನ್ನ ಆಡಳಿತಾವಧಿಯಲ್ಲಿ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಸೇರಿದಂತೆ ಅನರ್ಹರಾಗಿರುವ ಯಾವ ಶಾಸಕರಿಗೂ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಶನಿವಾರ ಅಥಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಪ್ರತಿನಿಧಿಸುತ್ತಿದ್ದ ಗೋಕಾಕ್ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿಕೊಡಲು ಸಚಿವ ಸಂಪುಟದ ಒಪ್ಪಿಗೆ ಪಡೆದು ಅನುದಾನ ಒದಗಿಸಿದ್ದೇನೆ ಎಂದರು.

ಅದೇ ರೀತಿ ಮಹೇಶ್ ಕುಮಟಳ್ಳಿ ಪ್ರತಿನಿಧಿಸುತ್ತಿದ್ದ ಅಥಣಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೂ ಗಮನ ನೀಡಿದ್ದೇನೆ. ಯೋಜನೆಗಳಿಗೆ ಅನುಗುಣವಾಗಿ ಅನುದಾನವನ್ನು ಬಿಡುಗಡೆ ಮಾಡಿದ್ದೇನೆಯೇ ಹೊರತು, ಸುಮ್ಮನೆ ಅನುದಾನ ಕೊಡಲು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ದುಡ್ಡು ಹೊಡೆಯಲು ಅನುದಾನ ಕೊಡಬೇಕೇ ಅಥವಾ ಜನರ ಕೆಲಸಕ್ಕಾಗಿ ಕೊಡಬೇಕೇ? ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ವೆಚ್ಚ ಇದ್ದಿದ್ದರಿಂದ, ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಅನುದಾನ ಸಿಕ್ಕಿರಬಹುದು. ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡುವ ಪ್ರಶ್ನೆಯೇ ಇಲ್ಲ. ಎಲ್ಲ ಶಾಸಕರಿಗೂ ಅಗತ್ಯಕ್ಕೆ ಅನುಗುಣವಾಗಿ ಹಣ ಕೊಟ್ಟಿದ್ದೇನೆ ಎಂದು ಅವರು ಹೇಳಿದರು.

ಮಹೇಶ್ ಕುಮಟಳ್ಳಿ 8-10 ಬಾರಿ ನನ್ನನ್ನು ಭೇಟಿ ಮಾಡಿದ್ದಾರೆ. ಚುನಾವಣೆಯಲ್ಲಿ ನಾನು ಗೆಲ್ಲಲು ರಮೇಶ್ ಜಾರಕಿಹೊಳಿ ಸಹಕಾರ ಕೊಟ್ಟಿದ್ದಾರೆ. ಆದುದರಿಂದ, ಅವರು ಕೈಗೊಳ್ಳುವ ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು. ಅದಕ್ಕಾಗಿ ಅವರು ಬಿಜೆಪಿಗೆ ಹೋಗಿದ್ದಾರೆಯೇ ಹೊರತು, ಅನುದಾನ ಬಿಡುಗಡೆಯಲ್ಲಿ ನಾನು ತಾರತಮ್ಯ ಮಾಡಿದ್ದೇನೆ ಎಂಬ ಕಾರಣಕ್ಕಾಗಿ ಅಲ್ಲ ಎಂದು ಕುಮಾರಸ್ವಾಮಿ ಹೇಳಿದರು.

ಬಿಜೆಪಿಯವರು ಈಗಾಗಲೇ ಹಲವಾರು ಶಾಸಕರನ್ನು ಪ್ರಾಣಿಗಳ ರೀತಿಯಲ್ಲಿ ಖರೀದಿ ಮಾಡಿಕೊಂಡು ಹೋಗಿದ್ದಾರೆ. ಉಪ ಚುನಾವಣೆಯಲ್ಲಿ ಫಲಿತಾಂಶ ವ್ಯತ್ಯಾಸವಾದರೆ ಭದ್ರತೆಗಾಗಿ ಇರಲಿ ಎಂದು ಹೊಸದಾಗಿ ಶಾಸಕರನ್ನು ಹುಡುಕುತ್ತಿರಬಹುದು. ಡಿ.9ರಂದು ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಏನೇನು ಬದಲಾವಣೆಗಳು ಆಗುತ್ತವೆ ಎಂಬುದನ್ನು ಕಾದು ನೋಡೋಣ ಎಂದು ಅವರು ತಿಳಿಸಿದರು.

ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದಂತೆ 15 ಕ್ಷೇತ್ರ ಅಥವಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದಂತೆ 12 ಕ್ಷೇತ್ರದಲ್ಲಿ ನಾವು ಗೆಲ್ಲುತ್ತೇವೆ ಎಂದು ಹೇಳುವುದಿಲ್ಲ. ನನ್ನ ಅಭಿಪ್ರಾಯದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಕನಿಷ್ಠ 6-8 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದು ಕುಮಾರಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News