×
Ad

ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಅಡ್ಡಿ ಬೇಡ: ಹೊಟೇಲ್, ರೆಸಾರ್ಟ್, ಹೋಂಸ್ಟೇ ಅಸೋಸಿಯೇಷನ್ ಮನವಿ

Update: 2019-11-30 18:14 IST

ಮಡಿಕೇರಿ, ನ.30: ಕೊಡಗಿನ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ತೊಡಗಿಸಿಕೊಂಡಿದ್ದು, ಇವರ ಆರ್ಥಿಕ ಪ್ರಗತಿಗಾಗಿ ಪ್ರವಾಸೋದ್ಯಮದ ಅಭಿವೃದ್ಧಿಯ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾರ್ಯಗಳಿಗೆ ವಿನಾಕಾರಣ ಅಡ್ಡಿ ಉಂಟು ಮಾಡಲಾಗುವುತ್ತಿದೆ ಎಂದು ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್ ಮತ್ತು ಹೋಂಸ್ಟೇ ಅಸೋಸಿಯೇಷನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊಟೇಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಪ್ರವಾಸೋದ್ಯಮದ ಅಭ್ಯುದಯದ ದೃಷ್ಟಿಯಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸುಮಾರು 20 ಕೋಟಿ ರೂ.ಗಳ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.

ಮಡಿಕೇರಿಯ ರಾಜಾಸೀಟು ಉದ್ಯಾನವನದ ಬಳಿ ಸುಮಾರು 96 ಲಕ್ಷ ರೂ. ವೆಚ್ಚದಲ್ಲಿ ಕೂರ್ಗ್ ವಿಲೇಜ್ ಯೋಜನೆಯನ್ನು ಸಾಕಾರಗೊಳಿಸಲಾಗುತ್ತಿದೆ. ಆದರೆ ಇದಕ್ಕೂ ಕೆಲವರು ಆಕ್ಷೇಪ ವ್ಯಕ್ತಪಡಿಸಿರುವುದು ಸರಿಯಾದ ಕ್ರಮವಲ್ಲ. ಪ್ರವಾಸಿಗರನ್ನು ಉತ್ತೇಜಿಸಲು ಹೊಸ ಹೊಸ ಪರಿಕಲ್ಪನೆಗಳ ಮೂಲಕ ಪ್ರವಾಸಿ ತಾಣಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಿಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಕೊಡಗಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಕಳೆದ ಎರಡು ವರ್ಷಗಳಿಂದ ಕೊಡಗನ್ನು ಕಾಡಿದ ಪ್ರಾಕೃತಿಕ ವಿಕೋಪದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿರುವವರು ತಾವು ಮಾಡಿದ ಸಾಲವನ್ನು ತೀರಿಸಲಾಗದೆ, ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಈ ಸಾಲ ಮತ್ತು ಸಾಲದ ಮೇಲಿನ ಬಡ್ಡಿ ಪಾವತಿಗೆ ಒಂದು ವರ್ಷ ರಿಯಾಯಿತಿ ನೀಡಬೇಕೆಂದು ಈ ಹಿಂದೆ ಇದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಕೋರಲಾಗಿತ್ತು. ಆದರೆ ಬೇಡಿಕೆ ಈಡೇರಿರಲಿಲ್ಲ, ಇದೀಗ ಮತ್ತೊಮ್ಮೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಸಾಲ ಮತ್ತು ಬಡ್ಡಿ ರಿಯಾಯಿತಿಗಾಗಿ ಕೋರುವುದಾಗಿ ನಾಗೇಂದ್ರ ಪ್ರಸಾದ್ ತಿಳಿಸಿದರು.

ಕೊಡಗು ಪ್ರವಾಸೋದ್ಯಮ ಇಲಾಖೆಗೆ ಸಹಾಯಕ ನಿರ್ದೇಶಕರು ಮಾತ್ರ ಇದ್ದು, ಜಂಟಿ ನಿರ್ದೇಶಕರನ್ನು ನೇಮಿಸಬೇಕೆಂದು ಅವರು ಇದೇ ಸಂದರ್ಭ ಒತ್ತಾಯಿಸಿದರು. ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರಂತರವಾಗಿ ನೀಡುತ್ತಿರುವ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲವೆಂದು ಬೇಸರ ವ್ಯಕ್ತಪಡಿಸಿದ ನಾಗೇಂದ್ರ ಪ್ರಸಾದ್, ಶಾಸಕರು ಹಾಗೂ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿದರು.

ಅಸೋಸಿಯೇಷನ್ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಮಾತನಾಡಿ, ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೂ ವಿರೋಧ ವ್ಯಕ್ತವಾಗುತ್ತಿರುವುದು ವಿಷಾದಕರವೆಂದರು. ಪ್ರಾಕೃತಿಕ ವಿಕೋಪದಿಂದ ಕಾಫಿ, ಇನ್ನಿತರ ಬೆಳೆಗಳಿಗೆ ನಷ್ಟವಾಗಿದ್ದು, ಇದಕ್ಕೆ ಪರ್ಯಾಯವಾಗಿ ಪ್ರವಾಸೋದ್ಯಮವನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಕಳೆದ 15 ವರ್ಷಗಳಿಂದ ಈ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ತೊಡಗಿಸಿಕೊಂಡಿದ್ದಾರೆ. ಕಾಫಿ, ಕರಿಮೆಣಸು, ಏಲಕ್ಕಿ, ಜೇನು ಮತ್ತಿತರ ಕೃಷಿ ಉತ್ಪನ್ನಗಳಿಗೂ ಪ್ರವಾಸಿಗರಿಂದ ಬೇಡಿಕೆ ಹೆಚ್ಚಾಗಿದೆ. ಆಟೋ, ಟ್ಯಾಕ್ಸಿ ಮಾಲಕರಿಗೂ ಹಾಗೂ ಎಲ್ಲಾ ವಿಧದ ವರ್ತಕರಿಗೂ ಪ್ರವಾಸೋದ್ಯಮದಿಂದ ಆರ್ಥಿಕ ಬಲ ಸಿಗುತ್ತಿದೆ ಎಂದು ಚಿದ್ವಿಲಾಸ್ ಅಭಿಪ್ರಾಯಪಟ್ಟರು.

ಜಿಲ್ಲೆಯ ಇಡೀ ಪ್ರವಾಸೋದ್ಯಮವನ್ನು ವಿನಾಕಾರಣ ಕೀಳುಮಟ್ಟದಿಂದ ಗ್ರಹಿಸುವುದು ತಪ್ಪು ಎಂದು ಅವರು ಹೇಳಿದರು. ಪ್ರವಾಸೋದ್ಯಮದ ಕುರಿತು ಭಿನ್ನಾಭಿಪ್ರಾಯಗಳಿದ್ದರೆ ಪರಸ್ಪರ ಮಾತುಕತೆಯ ಮೂಲಕ ಅಭಿಪ್ರಾಯವನ್ನು ಹಂಚಿಕೊಳ್ಳಬಹುದಾಗಿದೆ. ಆದರೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವುದು ಸರಿಯಾದ ಕ್ರಮವಲ್ಲ. ರೈಲು ಮಾರ್ಗ ಮತ್ತು ಹೆದ್ದಾರಿ ಅಭಿವೃದ್ಧಿಗೂ ತಡೆಯೊಡ್ಡಿರುವುದು ವಿಷಾದಕರ ಎಂದರು.

ರಾಜಾಸೀಟು ಬಳಿ ಪ್ರಗತಿಯಲ್ಲಿರುವ ಕೂರ್ಗ್ ವಿಲೇಜ್ ಯೋಜನೆಗೆ ವಿರೋಧ ಬೇಡ ಎಂದು ಮನವಿ ಮಾಡಿದ ಅವರು, ನಿಶಾನಿ ಮೊಟ್ಟೆ ಪ್ರದೇಶಕ್ಕೆ ಅರಣ್ಯ ಇಲಾಖೆ ನಿರ್ಬಂಧ ಹೇರಿರುವ ಕ್ರಮವನ್ನು ಆಕ್ಷೇಪಿಸಿದರು.

ನಗರದಲ್ಲಿರುವ ಪುಟಾಣಿ ರೈಲನ್ನು ದುರಸ್ತಿ ಪಡಿಸಬೇಕು, ಹಳೆಯ ಖಾಸಗಿ ಬಸ್ ನಿಲ್ದಾಣದ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಮಡಿಕೇರಿ ಸ್ಕ್ವೇರ್ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು, ಮಡಿಕೇರಿ ನಗರದಲ್ಲಿ ದೂರದೂರದ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವುತ್ತಿರುವುರಿಂದ ಮಿನಿ ಬಸ್‍ಗಳ ವ್ಯವಸ್ಥೆ ಮಾಡಬೇಕು, ಮಳೆಹಾನಿ ಸಂದರ್ಭ ರಚನೆಯಾಗಿದ್ದ ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರಕ್ಕೆ ಪುನರ್‍ಜೀವ ನೀಡಬೇಕು ಎಂದು ಚಿದ್ವಿಲಾಸ್ ಮನವಿ ಮಾಡಿದರು. 

ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡರು ಅದಕ್ಕೆ ವಿರೋಧ ವ್ಯಕ್ತಪಡಿಸಿ ಕೆಲವರು ನೇರವಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಚೇಂಬರ್ ನಿಂದ ಪ್ರತಿಭಟನೆ
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ನವೀನ್ ಅಂಬೆಕಲ್ ಮಾತನಾಡಿ, ದಕ್ಷಿಣ ಕಾಶ್ಮೀರ ಎಂದೇ ಹೆಸರುವಾಸಿಯಾಗಿರುವ ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲವೆಂದು ಟೀಕಿಸಿದರು. ರಸ್ತೆ, ವಾಹನ ನಿಲುಗಡೆ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನೆ ನೀಡಲಾಗದ ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆಗಳು ನಡೆದರು ಸ್ಪಂದನೆ ದೊರೆಯುತ್ತಿಲ್ಲ. ಕಣ್ಮುಚ್ಚಿ ಕುಳಿತಿರುವ ಜಿಲ್ಲಾಡಳಿತ ತಕ್ಷಣ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಚೇಂಬರ್ ಆಫ್ ಕಾಮರ್ಸ್ ಮೂಲಕ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಹೋಂಸ್ಟೇ ಮಾಲಕರ ಸಂಘದ ಕಾರ್ಯದರ್ಶಿ ಮೀನಾ ಕಾರ್ಯಪ್ಪ ಮಾತನಾಡಿ, ಅನಧಿಕೃತ ಹೋಂಸ್ಟೇಗಳಿಂದಾಗಿ ಕೊಡಗಿನ ಆರೋಗ್ಯಕರ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಗಿನ ಸುಂದರ ಪರಿಸರದ ಸೌಂದರ್ಯವನ್ನು ಎಲ್ಲರೂ ಕಾಪಾಡಿಕೊಳ್ಳಬೇಕಿದೆ. ಪ್ರವಾಸಿಗರನ್ನು ಆಕರ್ಷಿಸಲು ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ನೀಡಬೇಕು ಎಂದರು.

ಪ್ರಮುಖರಾದ ಮೋಂತಿ ಗಣೇಶ್ ಮಾತನಾಡಿ, ಜಿಲ್ಲೆಯ ಹೊಂಸ್ಟೇಗಳಲ್ಲಿ ನಿಗಧಿಯಾಗಿರುವ ದರಕ್ಕಿಂತ ಕಡಿಮೆ ಮೊತ್ತದ ಬಾಡಿಗೆಯನ್ನು ಓಯೋ ಸಂಸ್ಥೆ ಪಡೆಯುತ್ತಿದ್ದು, ಇದು ಜಿಲ್ಲೆಯ ಪ್ರವಾಸೋದ್ಯಮದ ಆರ್ಥಿಕ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News