'ಪ್ರಧಾನಿ ಇನ್ನೂ 1 ಗಂಟೆ ಜಾಸ್ತಿ ಕೆಲಸ ಮಾಡಿದ್ದರೆ...': ಜಿಡಿಪಿ ಕುಸಿತದ ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು ?

Update: 2019-11-30 13:24 GMT

ಬೆಳಗಾವಿ, ನ.30: ಅನರ್ಹ ಶಾಸಕರಿಗೆ ತಮ್ಮ ಸ್ವಾರ್ಥದಿಂದಾಗಿ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂಬ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲ. ಅವರ ಕಣ್ಣ ಮುಂದಿರುವುದು ಸೂಟ್‌ಕೇಸ್ ಮತ್ತು ಮಂತ್ರಿ ಕುರ್ಚಿ ಮಾತ್ರ. ಇಂಥವರು ರಾಜಕಾರಣದಲ್ಲಿರಲು ನಾಲಾಯಕ್, ಇವರು ಗೆದ್ದರೆ ಜನಸೇವೆ ಮಾಡುವರೇ? ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ಕಾಗವಾಡ ವಿಧಾನಸಭೆ ಕ್ಷೇತ್ರದ ಮದಬಾವಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಕಾಗೆ ಅವರ ಪರವಾಗಿ ಅವರು ಮತ ಯಾಚಿಸಿದರು.

ಜಮಖಂಡಿಯ ಶ್ರೀಶೈಲ ದಳವಾಯಿ ಅವರು ಶ್ರೀಮಂತ್ ಪಾಟೀಲ್ ಅವರನ್ನು ನನ್ನ ಬಳಿ ಕರೆದುಕೊಂಡು ಬಂದು, ಇವರು ಜೆಡಿಎಸ್‌ನಲ್ಲಿದ್ದಾರೆ. ಚುನಾವಣೆಯಲ್ಲಿ ಎರಡನೆ ಸ್ಥಾನದಲ್ಲಿದ್ರು, ಕಾಂಗ್ರೆಸ್ ಟಿಕೆಟ್ ನೀಡಿದರೆ ಗೆಲುತ್ತಾರೆ ಎಂದಿದ್ರು. ನಾನು ಕಾರ್ಯಕರ್ತರ ಒಪ್ಪಿಗೆ ಪಡೆದು ಕಳೆದ ಬಾರಿ ಪಕ್ಷದ ಟಿಕೆಟ್ ನೀಡಿದ್ದೆ. ಕೊನೆಗೆ ಚುನಾವಣೆಯಲ್ಲಿ ಗೆದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಪಕ್ಷದಿಂದ ಗೆದ್ದ ಶ್ರೀಮಂತ ಪಾಟೀಲ್ ಈ ವಿಧಾನಸಭೆಯ ಅವಧಿ ಮುಗಿಯುವ ತನಕ ಕಾಂಗ್ರೆಸ್‌ನಲ್ಲಿ ಇರಬೇಕಿತ್ತು. ಆದರೆ, ಬಿಜೆಪಿಯವರು ಒಡ್ಡಿದ ಆಮಿಷಕ್ಕೆ ಬಲಿಯಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷಾಂತರ ಮಾಡಿ, ಈಗ ಅನರ್ಹ ಎಂಬ ಹಣೆಪಟ್ಟಿ ಕಟ್ಟಿಕೊಂಡು ತಿರುಗುತ್ತಿದ್ದಾರೆ. ಅವರನ್ನು ಸೋಲಿಸಿ, ಮನೆಗೆ ಕಳುಹಿಸುವ ಕೆಲಸವನ್ನು ಮತದಾರರು ಮಾಡಬೇಕು ಎಂದು ಅವರು ಕರೆ ನೀಡಿದರು.

ಇಂದಿನ ಪತ್ರಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಭಿಪ್ರಾಯ ಓದಿದೆ. ಪಕ್ಷಾಂತರಿ ಶಾಸಕರೆಲ್ಲ ಅನರ್ಹರಲ್ಲ ಅಂತ ಅವರು ವ್ಯಾಖ್ಯಾನಿಸಿದ್ದಾರೆ. 15 ಜನ ಪಕ್ಷಾಂತರಿ ಶಾಸಕರನ್ನು ಅನರ್ಹರು ಎಂದು ತೀರ್ಪು ನೀಡಿರುವುದು ನಾವಲ್ಲ, ದೇಶದ ಸರ್ವೋಚ್ಚ ನ್ಯಾಯಾಲಯ. ಎಸ್.ಎಂ.ಕೃಷ್ಣ ಅವರ ಈ ಹೇಳಿಕೆ ಸುಪ್ರೀಂ ಕೋರ್ಟ್‌ನ ನಿರ್ಣಯಕ್ಕೆ ಅಗೌರವ ಸೂಚಿಸಿದಂತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು. 

ರೆಸಾರ್ಟ್‌ನಿಂದ ಕದ್ದು ಓಡಿ ಹೋದ ಶ್ರೀಮಂತ್ ಪಾಟೀಲ್‌ಗೆ 350 ಕಿ.ಮೀ ದೂರದ ಮದ್ರಾಸ್ ತಲುಪುವವರೆಗೂ ಎದೆನೋವು ಇರಲಿಲ್ಲ. ಅಲ್ಲಿಂದ ಮುಂಬೈ ಹೋದ ಕೂಡಲೇ ಎದೆನೋವು ಬಂದು ಆಸ್ಪತ್ರೆ ಸೇರಿದರು. ಇವರು ಸೇರಿದ ಆಸ್ಪತ್ರೆಯಲ್ಲಿ ಹೃದ್ರೋಗ ವಿಭಾಗವೇ ಇರಲಿಲ್ಲ. ಇದು ಎಂಥ ಅಸಹ್ಯ ಅಲ್ಲವೇ? ಅವರು ತಮ್ಮಷ್ಟಕ್ಕೆ ತಾವೇ ನಾಚಿಕೆಪಡಬೇಕು ಎಂದು ಸಿದ್ದರಾಮಯ್ಯ ಕಿಡಿಕಾರಿದರು.

ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತೀವೆ ಅಂತ ಹೇಳುತ್ತಿದ್ದವರೆಲ್ಲ ಈಗ ಎಲ್ಲಿ ಹೋದರು? ಬಿಜೆಪಿ ಪಕ್ಷ ಒಂದೊಂದೆ ರಾಜ್ಯಗಳಲ್ಲಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳಲು ಆರಂಭಿಸಿದೆ. ಬಿಜೆಪಿ ಏನಾದರೂ ಇನ್ನೂ ಕೆಲವು ರಾಜ್ಯಗಳಲ್ಲಿ ಅಧಿಕಾರದಲ್ಲಿದ್ದರೆ ಅದು ಅನೈತಿಕ ಮಾರ್ಗದ ಮೂಲಕವೇ ಹೊರತು, ಜನಾಭಿಪ್ರಾಯದ ಆಧಾರದ ಮೇಲಲ್ಲ ಎಂದು ಅವರು ಹೇಳಿದರು.

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಏಕೈಕ ಪಕ್ಷ ಕಾಂಗ್ರೆಸ್. ದೇಶಕ್ಕೆ ಬಿಜೆಪಿ ಕೊಡುಗೆ ಏನೆಂದು ಹೇಳಲಿ? ಬಿಜೆಪಿಯ ಸಂಸದೆ ಸಾದ್ವಿ ಪ್ರಜ್ಞಾ ಸಿಂಗ್, ಮಹಾತ್ಮ ಗಾಂಧಿಯನ್ನು ಕೊಂದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಅಂತ ಕರೀತಾರೆ, ಅವರ ಆರಾಧನೆ ಮಾಡುತ್ತಾರೆ. ಹಾಗಾದರೆ ಬಿಜೆಪಿಯವರಿಗೆ ಕೊಲೆಗಾರರು ರೋಲ್ ಮಾಡೆಲ್‌ಗಳೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಚುನಾವಣಾ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಸಚಿವರಾದ ರಹೀಂಖಾನ್, ಪ್ರಕಾಶ್ ಹುಕ್ಕೇರಿ, ಉಮಾಶ್ರೀ, ಶಾಸಕರಾದ ಗಣೇಶ್ ಹುಕ್ಕೇರಿ, ಆನಂದ್ ನ್ಯಾಮಗೌಡ, ಯಶವಂತರಾಯಗೌಡ ಪಾಟೀಲ್, ಮಾಜಿ ಶಾಸಕ ಫಿರೋಝ್ ಸೇಠ್, ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಪ್ರಧಾನಿ ನರೇಂದ್ರ ಮೋದಿ ದಿನದ ಹದಿನೆಂಟು ಗಂಟೆ ಕೆಲಸ ಮಾಡಿದ್ದರ ಫಲ ದೇಶದ ಜಿಡಿಪಿ ಶೇ.4.5ಕ್ಕೆ ಇಳಿದಿದೆ, ನಿರುದ್ಯೋಗ 45 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದೆ, ಹಸಿವಿನ ಸೂಚ್ಯಂಕದಲ್ಲಿ ಬಾಂಗ್ಲಾದೇಶ, ಪಾಕಿಸ್ತಾನಕ್ಕಿಂತ ಭಾರತ ಹಿಂದಿದೆ. ಪ್ರಧಾನಿಗಳೇನಾದ್ರೂ ಇನ್ನೂ ಒಂದು ಗಂಟೆ ಜಾಸ್ತಿ ಕೆಲಸ ಮಾಡಿದ್ದರೆ ದೇಶದ ಸ್ಥಿತಿ ಏನಾಗುತ್ತಿತ್ತೋ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News