ಮೂವರು ಮಕ್ಕಳಿಗೆ ಥಳಿಸಿ, ಕಾದ ಕಬ್ಬಿಣದಿಂದ ಬರೆ ಹಾಕಿದ ತಂದೆ
ಚಿಕ್ಕಮಗಳೂರು, ನ.30: ಕ್ಷುಲ್ಲಕ ಕಾರಣಕ್ಕೆ ತಂದೆಯೊಬ್ಬ ಕುಡಿದ ಮತ್ತಿನಲ್ಲಿ ತನ್ನ ಮೂವರು ಮಕ್ಕಳಿಗೆ ಕಾದ ಕಬ್ಬಿಣದ ವಸ್ತುವಿನಿಂದ ಬರೆ ಹಾಕಿದ ಘಟನೆ ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗ್ರಾಮವೊಂದರಲ್ಲಿ ವರದಿಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಘಟನೆಯಿಂದಾಗಿ ಮೂವರು ಮಕ್ಕಳು ನಡೆಯಲಾಗದೇ ನರಕಯಾತನೆ ಅನುಭವಿಸುವಂತಾಗಿದೆ.
ಮೂಡಿಗೆರೆ ತಾಲೂಕಿನ ಬಿಳಗೋಡು ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಹೆಸಗಲ್ ಗ್ರಾಮದಲ್ಲಿ ಕಳೆದ ನ.24 ರಂದು ಹರೀಶ್ ಎಂಬವರ ನಾಲ್ವರು ಮಕ್ಕಳು ಗ್ರಾಮದಲ್ಲಿರುವ ಹಳ್ಳವೊಂದರ ಬಳಿಗೆ ಹೋಗಿದ್ದು, ಇದರಿಂದ ಆಕ್ರೋಶಗೊಂಡ ತಂದೆ ಹರೀಶ್ ಸಂಜೆಯಾಗುತ್ತಲೇ ಮನೆಗೆ ಕುಡಿದು ಬಂದು ತನ್ನ ನಾಲ್ವರು ಮಕ್ಕಳಿಗೆ ಮನಬಂದಂತೆ ಥಳಿಸಿದ್ದಾರೆ ಎನ್ನಲಾಗಿದೆ. ಇಷ್ಟಕ್ಕೆ ಸುಮ್ಮನಾಗದ ಅವರು ಕಬ್ಬಿಣದ ಸರಳೊಂದನ್ನು ಕಾಯಿಸಿ ಅದರಿಂದ ನಾಲ್ವರು ಮಕ್ಕಳ ಪೈಕಿ ಮೂವರಿಗೆ ಕೈ ಕಾಲು, ಬೆನ್ನು, ಕುತ್ತಿಗೆ ಹಾಗೂ ಪಾದಗಳಿಗೆ ಬರೆ ಹಾಕಿ ಅಮಾನವೀಯವಾಗಿ ವರ್ತಿಸಿದ್ದಾರೆ. ಹರೀಶನ ಪತ್ನಿ ಇದನ್ನು ತಡೆಯಲು ಮುಂದಾದಾಗ ಆಕೆಗೂ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಹರೀಶನ ಮಕ್ಕಳೆಲ್ಲರೂ 10 ವರ್ಷ ವಯಸ್ಸಿನೊಳಗಿನವರಾಗಿದ್ದು, ಹಿರಿಯ ಮಗಳಿಗೆ ಬೆತ್ತದಿಂದ ಹೊಡೆದಿದ್ದರೆ, ಉಳಿದ ಮೂವರು ಮಕ್ಕಳಿಗೆ ಕಾದ ಕಬ್ಬಿಣದಿಂದ ಬರೆ ಹಾಕಿದ್ದಾರೆ. ಪರಿಣಾಮ ಮೂವರು ಮಕ್ಕಳ ಮೈ ತುಂಬ ಬರೆಗಳ ಅಚ್ಚು ಬಿದ್ದಿದ್ದು, ಪಾದಗಳಿಗೂ ಬರೆ ಹಾಕಿರುವುದರಿಂದ ಮಕ್ಕಳು ನಡೆಯಲಾಗದೇ ಕುಳಿತಲ್ಲೇ ಕೂರುವಂತಾಗಿದೆ. ಅಲ್ಲದೇ ಮೂವರು ಮಕ್ಕಳು ಶಾಲೆಗೂ ಹೋಗದಂತಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪೊಕ್ಸೊ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಲ್ಲದೇ ಆರೋಪಿಯಾಗಿರುವ ಹರೀಶನನ್ನು ಪೊಲೀಸರು ಬಂಧಿಸಿದ್ದು, ಆತ ಸದ್ಯ ಜಾಮೀನು ಪಡೆದಿದ್ದಾನೆಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ಪಡೆದಿರುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತರಾದ ರವಿ ಹಾಗೂ ಅಶ್ವಿನಿ ಶನಿವಾರ ಮಕ್ಕಳ ಮನೆಗೆ ಭೇಟಿ ನೀಡಿ ಮಕ್ಕಳು ಹಾಗೂ ಹರೀಶನ ಪತ್ನಿಯಿಂದ ಮಾಹಿತಿ ಪಡೆದು ಹೇಳಿಕೆ ದಾಖಲಿಸಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಹರೀಶ ದೂರು ನೀಡಿದ ದ್ವೇಷದಿಂದ ಮತ್ತೆ ಮಕ್ಕಳಿಗೆ ಹಲ್ಲೆ ಮಾಡುವ ಬಗ್ಗೆ ಹರೀಶ್ ಪತ್ನಿ ಆತಂಕ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದ್ದು, ಮಕ್ಕಳು ಚೇತರಿಸಿಕೊಂಡ ಬಳಿಕ ಮಕ್ಕಳನ್ನು ಸೂಕ್ತ ರಕ್ಷಣೆಯೊಂದಿಗೆ ಶಿಕ್ಷಣ ಮುಂದುವರಿಸುವ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ಘಟಕದ ಕಾರ್ಯಕರ್ತರು ಅಗತ್ಯ ಕ್ರಮವಹಿಸಿದ್ದಾರೆಂದು ತಿಳಿದುಬಂದಿದೆ.