ರಂಗೇರಿದ ಚುನಾವಣಾ ಕಣ: ಆರೋಪ-ಪ್ರತ್ಯಾರೋಪ, ಜಾತಿ ಲೆಕ್ಕಾಚಾರದಲ್ಲಿ ಮತ ಬೇಟೆ
ಬೆಂಗಳೂರು, ನ.30: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಯ ಬಹಿರಂಗ ಪ್ರಚಾರವು ಡಿ.3ಕ್ಕೆ ಅಂತಿಮಗೊಳ್ಳಲಿದೆ. ಈ ಉಪ ಚುನಾವಣೆಯು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಗೆಲುವುಗಾಗಿ ಶ್ರಮಿಸುತ್ತಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಶಾಸಕರು ರಾಜೀನಾಮೆ ನೀಡಿದ್ದರಿಂದ ಸರಕಾರ ಪತನಗೊಂಡಿತ್ತು. ಬಿಜೆಪಿಯು ಸರಕಾರ ರಚನೆಗೆ ಎಲ್ಲರೂ ಪರೋಕ್ಷ ಬೆಂಬಲ ನೀಡಿದ್ದರಿಂದ ಅನರ್ಹಗೊಂಡವರನ್ನು ಪಕ್ಷಕ್ಕೆ ಆಹ್ವಾನಿಸಿ ಉಪ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿದೆ.
ಹೀಗಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್‌ಗಳ ನಾಯಕರು ತಮ್ಮ ಪಕ್ಷಕ್ಕೆ ದ್ರೋಹ ಎಸಗಿದವರನ್ನು ಸೋಲಿಸಲು ಪಣತೊಟ್ಟಿದ್ದಾರೆ. ಇನ್ನೊಂದು ಕಡೆ ಬಿಜೆಪಿ ನಾಯಕರು ಸರಕಾರ ಉಳಿಸಿಕೊಳ್ಳುವ ಸಲುವಾಗಿ, ಎಷ್ಟೇ ಕಷ್ಟವಾದರೂ ಗೆಲ್ಲಲೇಬೇಕು ಎಂಬ ಹಟಕ್ಕೆ ಬಿದ್ದಿದ್ದು, ಉಪ ಚುನಾವಣೆ ಕಣ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ.
ಈಗಾಗಲೇ ಹಲವು ಸುತ್ತಿನಲ್ಲಿ ಎಲ್ಲ ಪಕ್ಷದ ಮುಖಂಡರು ತಮ್ಮ ಅಭ್ಯರ್ಥಿಗಳ ಪರ ಬಹಿರಂಗ ಪ್ರಚಾರ ನಡೆಸಿದ್ದಾರೆ. ಪ್ರಚಾರದ ಅಬ್ಬರ ಮುಗಿಲು ಮುಟ್ಟಿದ್ದು, ನಾಯಕರ ಪರಸ್ಪರ ಆರೋಪ-ಪ್ರತ್ಯಾರೋಪಗಳು ನಡೆದಿವೆ. ಮತ್ತೊಂದು ಕಡೆ ಮೂರು ಪಕ್ಷಗಳು ಜಾತಿ ಲೆಕ್ಕಾಚಾರದಲ್ಲಿ ಮತದಾರರನ್ನು ಸೆಳೆಯುತ್ತಿದ್ದಾರೆ.
ಮಠಗಳ ರಾಜಕೀಯ: ಚುನಾವಣೆ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳ ನಾಯಕರು, ಅಖಾಡದಲ್ಲಿರುವ ಅಭ್ಯರ್ಥಿಗಳು ಮಠಗಳನ್ನು ಭೇಟಿ ಮಾಡುವುದು ಸಂಪ್ರದಾಯದಂತಾಗಿದೆ. ಮೂರು ಪಕ್ಷಗಳಿಂದಲೂ ಬಹುತೇಕರು ಮಠಗಳಿಗೆ ತೆರಳಿ, ಅಲ್ಲಿಂದ ನಮ್ಮ ಪರ ವಕಾಲತ್ತು ವಹಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಮತ ಭೇಟೆ: ರಾಜ್ಯ, ರಾಷ್ಟ್ರ ಮಟ್ಟದ ನಾಯಕರು, ಬೇರೆ ಬೇರೆ ಜಿಲ್ಲೆಗಳ ಶಾಸಕರು ಹಾಗೂ ಮುಖಂಡರು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಹಗಲು-ರಾತ್ರಿ ಎನ್ನದೇ ರ‍್ಯಾಲಿ, ರೋಡ್ ಶೋ, ಸಭೆಗಳ ಮೂಲಕ ಮತಯಾಚನೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಎಲ್ಲ ಪಕ್ಷಗಳ ಬೆಂಬಲಿಗರು ಮನೆ ಮನೆ ಪ್ರಚಾರ ಮಾಡುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡುತ್ತಿದ್ದಾರೆ.
ಅನರ್ಹ ಶಾಸಕರಿಗೆ ಬಹಿಷ್ಕಾರ: ಸಮ್ಮಿಶ್ರ ಸರಕಾರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದವರು, ರಾಜೀನಾಮೆ ನೀಡಿದ ಬಳಿಕ ಅಂದಿನ ಸ್ಪೀಕರ್ ಅವರನ್ನು ಅನರ್ಹರನ್ನಾಗಿ ಮಾಡಿದ್ದರು. ಇದೀಗ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡುತ್ತಿರುವ ಹಲವರಿಗೆ ತಮ್ಮ ಕ್ಷೇತ್ರಗಳಲ್ಲಿನ ಗ್ರಾಮಗಳಿಗೆ ಬಾರದಂತೆ ಬಹಿಷ್ಕಾರ ಹಾಕುತ್ತಿರುವ ಘಟನೆಗಳು ಕಂಡುಬಂದಿವೆ.
ಒಟ್ಟಾರೆಯಾಗಿ ಬಿಜೆಪಿಗೆ ಬಹುಮತಕ್ಕೆ ಸಾಧ್ಯವಾಗುವಷ್ಟು ಜನರನ್ನು ಗೆಲ್ಲಿಸಿಕೊಳ್ಳಬೇಕು ಎಂಬ ಪಣ ತೊಟ್ಟಿದ್ದು, ಎಲ್ಲ ರೀತಿಯ ಪ್ರಯತ್ನಗಳು ಮಾಡುತ್ತಿದೆ. ಮತ್ತೊಂದು ಕಡೆ, ನಂಬಿದವರು ಮೋಸ ಮಾಡಿದ್ದು, ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ಡಿ.5ರಂದು ಉಪಚುನಾವಣೆಯ ಮತದಾನ ನಡೆಯಲಿದ್ದು, ಅಂತಿಮವಾಗಿ ಡಿ.9 ರಂದು ಮತ ಎಣಿಕೆ ಬಳಿಕ ಮತದಾರರು ಯಾರಿಗೆ ಬೆಂಬಲ ಸೂಚಿಸಿದ್ದಾರೆ ಎಂಬುದು ತಿಳಿಯಲಿದೆ.