×
Ad

ಮತ್ತೊಮ್ಮೆ ಮೈತ್ರಿ ಸರಕಾರ: ಬಿ.ಕೆ. ಹರಿಪ್ರಸಾದ್

Update: 2019-11-30 20:16 IST

ಹುಬ್ಬಳ್ಳಿ, ನ. 30: ಉಪಚುನಾವಣೆ ಫಲಿತಾಂಶದ ನಂತರ ರಾಜ್ಯದಲ್ಲಿನ ಬಿಜೆಪಿ ಸರಕಾರ ಪತನಗೊಳ್ಳಲಿದ್ದು, ಜೆಡಿಎಸ್ ವರಿಷ್ಠ ದೇವೇಗೌಡ ಸಮ್ಮತಿಸಿದರೆ ಮೈತ್ರಿ ಸರಕಾರ ರಚನೆ ಮಾಡಲಾಗುವುದು ಎಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ರಾಜಕೀಯ ಬೆಳವಣಿಗೆ ಬಳಿಕ ದೇವೇಗೌಡರಿಗೂ, ಮೈತ್ರಿ ಬಗ್ಗೆ ಮನವರಿಕೆಯಾಗಿದೆ. ಇಲ್ಲದಿದ್ದರೆ, ಮುಂದೇನಾಗಲಿದೆ ಎಂದು ಕಾದು ನೋಡಬೇಕಿದೆ ಎಂದು ನುಡಿದರು.

ಉಪ ಚುನಾವಣೆಯಲ್ಲಿ ಹದಿನೈದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತ ಎಂದ ಹರಿಪ್ರಸಾದ್, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿದ ಬಳಿಕ ಎರಡೂ ಪಕ್ಷಗಳ ಉಭಯ ನಾಯಕರ ನಡುವಿನ ದೋಷಾರೋಪ ಇದೀಗ ತಣ್ಣಗಾಗಿದೆ. ಹೀಗಾಗಿ ಸರಕಾರ ರಚನೆಗೆ ಯಾವುದೇ ಅಡ್ಡಿ ಇಲ್ಲ ಎಂದರು.

ಅಧಿಕಾರ ದಾಹದಿಂದಾಗಿ ಬಿಜೆಪಿ, ಶಾಸಕರನ್ನು ಖರೀದಿಸಿ ಅಭಿವೃದ್ಧಿ ದಿಕ್ಕಿನತ್ತ ಸಾಗುತ್ತಿದ್ದ ಮೈತ್ರಿ ಸರಕಾರವನ್ನು ಬೀಳಿಸಿದರು. ಅದರ ಪ್ರತಿಫಲವನ್ನು ಬಿಜೆಪಿ ಉಪ ಚುನಾವಣೆಯಲ್ಲಿ ಅನುಭವಿಸಲಿದೆ ಎಂದ ಎಚ್ಚರಿಸಿದ ಅವರು, ಪ್ರವಾಹ ಸ್ಥಿತಿಯನ್ನು ನಿಭಾಯಿಸುವಲ್ಲಿ ಹಾಗೂ ಸಂತ್ರಸ್ತರ ಕಣ್ಣೊರೆಸುವಲ್ಲಿ ಬಿಜೆಪಿ ಸೋತಿದೆ ಎಂದು ದೂರಿದರು.

ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನಲ್ಲಿ ಯಾರೂ ಒಬ್ಬಂಟಿಯಾಗಿಲ್ಲ. ಎಲ್ಲರೂ ಅವರವರಿಗೆ ವಹಿಸಿದ ಕೆಲಸಗಳನ್ನು ಮಾಡುತ್ತಿದ್ದಾರೆ. ಖರ್ಗೆ ಅವರು, ಮಹಾರಾಷ್ಟ್ರ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮೋಯ್ಲಿ, ಮುನಿಯಪ್ಪ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ ಎಂದರು.

‘ಸಚಿವ ಈಶ್ವರಪ್ಪ ಒಮ್ಮೆಯೂ ತಾವು ಹೇಳಿಕೆ ನೀಡಿದಂತೆ ನಡೆದುಕೊಂಡಿಲ್ಲ. ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಸೋತರೆ ನಾನು ರಾಜೀನಾಮೆ ನೀಡುತ್ತೇನೆ ಎಂಬ ಈಶ್ವರಪ್ಪರ ಹೇಳಿಕೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ’
-ಬಿ.ಕೆ.ಹರಿಪ್ರಸಾದ್, ರಾಜ್ಯಸಭಾ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News