ಅನ್ನಭಾಗ್ಯದ ಅಕ್ಕಿಯ ಪ್ರಮಾಣ 10 ಕೆ.ಜಿ.ಗೆ ಏರಿಸುತ್ತೇವೆ: ಸಿದ್ದರಾಮಯ್ಯ
ಬೆಳಗಾವಿ, ನ.30: ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿಯನ್ನು ಸೋಲಿಸುವ ಮೂಲಕ ಗೋಕಾಕ್ ರಿಪಬ್ಲಿಕ್ ಕೊನೆಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶನಿವಾರ ನಗರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಚುನಾವಣಾ ಪ್ರಚಾರ ನಡೆಸಿದ ಅವರು, ನನಗೆ ಗೊತ್ತಿದೆ ಗೋಕಾಕ್ ರಿಪಬ್ಲಿಕ್ ಪ್ರದೇಶ. ಹಿಂದೆ ಬಳ್ಳಾರಿಯೂ ಇದೇ ರೀತಿ ಇತ್ತು. ರೆಡ್ಡಿ ಬ್ರದರ್ಸ್ ಹೀಗೆ ಮಾಡಿಕೊಂಡಿದ್ದರು. ನಾನು ಪಾದಯಾತ್ರೆ ಮಾಡಿ, ಅಲ್ಲಿಂದ ಬಿಜೆಪಿಯನ್ನು ಕಿತ್ತೊಗೆದೆ. ಈಗ ಮುಕ್ತ ವಾತಾವರಣವಿದೆ. ಇಂತಹದ್ದೇ ವಾತಾವರಣ ಇಲ್ಲಿಯೂ ಬರಬೇಕಾದರೆ ರಮೇಶ ಅವರನ್ನು ಸೋಲಿಸಿ ಎಂದರು.
ಗೋಕಾಕ್ ಪ್ರಗತಿಗಾಗಿ ಅನುದಾನ ನೀಡಲಿಲ್ಲವೆಂದು ರಮೇಶ ಆರೋಪಿಸಿದ್ದರು. ಆದರೆ, ಅವರೇ ಸಚಿವರು ಎನ್ನುವುದನ್ನು ಮರೆತಿದ್ದರು. ಶಾಸಕರಾಗಿಯೂ, ಸಚಿವರಾಗಿಯೂ ಸರಿಯಾಗಿ ಕೆಲಸ ಮಾಡಲಿಲ್ಲ. ಅಂತಹವರು ಮತ್ತೆ ಆಯ್ಕೆ ಬೇಡ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಡಿ.9ರ ನಂತರ ಪುನಃ ನಾವೇ ಸರಕಾರ ರಚಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅನ್ನಭಾಗ್ಯ ಯೋಜನೆಯಡಿ ನೀಡಲಾಗುತ್ತಿರುವ 7 ಕೆ.ಜಿ. ಅಕ್ಕಿಯ ಪ್ರಮಾಣವನ್ನು 10 ಕೆ.ಜಿ.ಗೆ ಏರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿ ಲಖನ್ ಜಾರಕಿಹೊಳಿ, ಶಾಸಕ ಸತೀಶ ಜಾರಕಿಹೊಳಿ ಸೇರಿದಂತೆ ಪ್ರಮುಖರಿದ್ದರು.