×
Ad

ಸಿದ್ದರಾಮಯ್ಯ ಕ್ಷಮೆಯಾಚನೆಗೆ ಸವಿತಾ ಸಮಾಜ ಆಗ್ರಹ

Update: 2019-11-30 23:00 IST

ಬೆಂಗಳೂರು, ನ.30: ಸವಿತಾ ಸಮಾಜದ ಜಾತಿ ನಿಂದನೆ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಲೇ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಸವಿತಾ ಸಮಾಜದ ಮೀಸಲಾತಿ ಒಕ್ಕೂಟ ಆಗ್ರಹಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಟಿ. ತ್ಯಾಗರಾಜ್, ಹರಿಹರ ತಾಲೂಕಿನ ಕುಮಾರ ಪಟ್ಟಣದಲ್ಲಿ ಇತ್ತೀಚೆಗೆ ಚುನಾವಣೆ ಪ್ರಚಾರದ ವೇಳೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬಿಜೆಪಿ ನಾಯಕರನ್ನು ಟೀಕಿಸುವ ಭರದಲ್ಲಿ ಯಡಿಯೂರಪ್ಪ ಈಶ್ವರಪನಿಗೆ ಕ್ಷೌರಿಕಾ ವೃತ್ತಿಯ ಬಗ್ಗೆ ಪದ ಬಳಸಿದ್ದು, ಇದರಿಂದ ಸವಿತಾ ಸಮಾಜದ ವೃತ್ತಿಯನ್ನು ಬೈಗುಳವಾಗಿ ಬಳಸಿ ಸಮಾಜಕ್ಕೆ ಅತೀವ ನೋವು ಉಂಟಾಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

ಸವಿತಾ ಸಮಾಜದ ಜಾತಿ ನಿಂದನೆ ಪದವನ್ನು ಬೈಗುಳವಾಗಿ ಉಪಯೋಗಿಸಿದರೆ, ಅವರನ್ನು ಶಿಕ್ಷಿಸುವ ಕಾನೂನಿನ ವರದಿಯನ್ನು ಈಗಾಗಲೇ ಹಿಂದುಳಿದ ವರ್ಗಗಳ ಆಯೋಗ ಸರಕಾರಕ್ಕೆ ಸಲ್ಲಿಸಿದೆ. ಸದ್ಯ ವರದಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ ಬಳಿಯಿದೆ. ಅದನ್ನು ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯನವರು ಮಂಡಿಸಬೇಕು ಎಂದು ಒತ್ತಾಯಿಸಿದರು.

ಸಮಾಜ ಜಾತಿ ನಿಂದನೆ ಪದವನ್ನು ರಾಜಕೀಯ ನಾಯಕರು ಬೈಗುಳವಾಗಿ ಬಳಸಿ, ಸಮಾಜಕ್ಕೆ ನಿರಂತರವಾಗಿ ಅವಮಾನ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಾತಿ ನಿಂದನೆ ಕಾನೂನನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News