ರಜೆ ಪಡೆಯಲು ಪೊಲೀಸರಿಗೆ ಇನ್ನು ಆನ್‌ಲೈನ್‌ನಲ್ಲೇ ಅರ್ಜಿ ?

Update: 2019-11-30 17:44 GMT

ಬೆಂಗಳೂರು, ನ.30: ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಸಿಬ್ಬಂದಿ ರಜೆ ಪಡೆಯಬೇಕಾದರೆ, ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸುವ ವಿಶೇಷ ಅವಕಾಶ ಕಲ್ಪಿಸಲು ಇಲಾಖೆ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಆನ್‌ಲೈನ್ ರಜಾ ಅರ್ಜಿಯನ್ನು ಜಾರಿಗೆ ತರುವ ಬಗ್ಗೆ ಅದರ ಸಾಧಕ ಬಾಧಕಗಳ ಕುರಿತು ಅಭಿಪ್ರಾಯ ತಿಳಿಸುವಂತೆ ರಾಜ್ಯದ ಎಲ್ಲ ನಗರದ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಇನ್‌ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್‌ಗೆ ಡಿಜಿ-ಐಜಿಪಿ ಕಚೇರಿಯಿಂದ ಸೂಚನೆ ನೀಡಲಾಗಿದೆ. ತಮ್ಮ ಅಭಿಪ್ರಾಯವನ್ನು ಕಚೇರಿಯ ಇ-ಮೇಲ್ ವಿಳಾಸಕ್ಕೆ ಕಳುಹಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಕಾಗದದಲ್ಲಿ ಬರೆದು ರಜಾ ಅರ್ಜಿ ಸಲ್ಲಿಸಬೇಕಿದ್ದ ಕಾರಣ ಮೇಲಾಧಿಕಾರಿಗಳ ಗಮನಕ್ಕೆ ಬರುವುದು ವಿಳಂಬವಾಗುತ್ತಿತ್ತು. ಆನ್‌ಲೈನ್‌ನಲ್ಲಿ ರಜಾ ಅರ್ಜಿಯಿಂದ ಈ ತೊಂದರೆ ತಪ್ಪಲಿದೆ. ರಜಾ ಅರ್ಜಿಯಲ್ಲಿ ನಮೂದಿಸಿದ ವಿಚಾರವು ಸ್ಪಷ್ಟವಾಗಿರಲಿದೆ. ಒಮ್ಮೆ ಕಾರಣ ಬರೆದ ಬಳಿಕ ಇದನ್ನು ತಿರುಚಲು ಅವಕಾಶಗಳಿರುವುದಿಲ್ಲ. ಹಾಗಾಗಿ, ಆನ್‌ಲೈನ್ ರಜೆ ಬರಲಿದೆ ಎಂದು ತಿಳಿದುಬಂದಿದೆ.

ಆನ್‌ಲೈನ್‌ನಲ್ಲಿ ರಜಾ ಅರ್ಜಿ ಸಲ್ಲಿಸುವ ಕ್ರಮ ಇನ್ನೂ ಜಾರಿಗೆ ತಂದಿಲ್ಲ. ಎಲ್ಲ ಕಡೆಗಳಲ್ಲೂ ಆನ್‌ಲೈನ್‌ನಲ್ಲಿ ರಜಾ ಅರ್ಜಿ ಸಲ್ಲಿಸಲು ಸಿಬ್ಬಂದಿಗೆ ಅನುಕೂಲಗಳಿದ್ದರೆ, ಈ ಕ್ರಮ ಜಾರಿಗೆ ತರಲಾಗುವುದು.

-ಸೀಮಂತ್ ಕುಮಾರ್ ಸಿಂಗ್, ಐಜಿಪಿ (ಆಡಳಿತ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News