ರಾಜ್ಯದಲ್ಲಿ ಎಚ್‌ಐವಿ ಸೋಂಕು ಹರಡುವಿಕೆ ಪ್ರಮಾಣ ಇಳಿಕೆ

Update: 2019-11-30 17:50 GMT

ಬೆಂಗಳೂರು, ನ.30: ಜಾಗೃತಿ ಹಾಗೂ ಮುಂಜಾಗ್ರತೆ ಕ್ರಮಗಳಿಂದಾಗಿ ರಾಜ್ಯದಲ್ಲಿ ಕಳೆದ ಏಳು ತಿಂಗಳಲ್ಲಿ ಎಚ್‌ಐವಿ ಸೋಂಕು ಹರಡುವಿಕೆ ಪ್ರಮಾಣ ಶೇ.0.10ರಷ್ಟು ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆಯಾಗುವ ಕುರಿತು ಕರ್ನಾಟಕ ಏಡ್ಸ್ ನಿಯಂಣತ್ರಣ ಸೊಸೈಟಿ ವಿಶ್ವಾಸ ವ್ಯಕ್ತಪಡಿಸಿದೆ.

ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ (ಕೆಸಾಪ್ಸ್) ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ (ಐಸಿಟಿಸಿ) ಎಚ್‌ಐವಿ ಸೋಂಕಿತರನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಲಾಗುತ್ತದೆ. ಕೆಸಾಪ್ಸ್ ಮಾಹಿತಿ ಪ್ರಕಾರ 2018-19 ನೇ ಸಾಲಿನಲ್ಲಿ ಒಟ್ಟಾರೆ 24,73,845 ಮಂದಿಗೆ ಪರೀಕ್ಷೆ ಮಾಡಿಸಿದ್ದು, 18,143 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರ ಪ್ರಮಾಣ ಶೇ.0.73ರಷ್ಟಿತ್ತು. ಆದರೆ ಈ ವರ್ಷ ಮೊದಲ ಏಳು ತಿಂಗಳಲ್ಲಿ ಒಟ್ಟಾರೆ 14,97,590 ಮಂದಿಗೆ ಪರೀಕ್ಷೆ ಮಾಡಿಸಿದ್ದು, 9,504 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಇದರ ಪ್ರಮಾಣ ಶೇ.0.63 ರಷ್ಟಿದೆ. ಈ ಮೂಲಕ ಇದರ ಪ್ರಮಾಣ ಹರಡುವ ಪ್ರಮಾಣ ಶೇ.0.10 ರಷ್ಟು ಇಳಿಕೆಯಾಗಿದೆ.

ರಾಜ್ಯದಲ್ಲಿ ಒಟ್ಟು 54 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು, (ಸುರಕ್ಷಾ ಕ್ಲಿನಿಕ್) ಇವುಗಳ ಅಡಿಯಲ್ಲಿ 2019ರಲ್ಲಿ 4,20,808 ಲಕ್ಷ ಮಂದಿಗೆ ಪರೀಕ್ಷೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಏಪ್ರಿಲ್ 2019ರಿಂದ ಅಕ್ಟೋಬರ್‌ವರೆಗೆ 1,36,135 ಮಂದಿ ಪರೀಕ್ಷೆ ಮಾಡಿಸಿದ್ದಾರೆ. ಈ ಮೂಲಕ ಶೇ.33ರಷ್ಟು ಪ್ರಗತಿ ಸಾಧಿಸಿದೆ. ಸೋಂಕಿತ ತಾಯಿಯಿಂದ ಮಗುವಿಗೆ ಕೂಡಾ ಎಚ್‌ಐವಿ ಹರಡುವ ಸಾಧ್ಯತೆ ಇದ್ದು, ಗರ್ಭಾವಸ್ಥೆಯಲ್ಲಿ ಹಾಗೂ ಎದೆ ಹಾಲು ಸೇವನೆಯಿಂದ ಸೋಂಕು ಹರಡಲಿದೆ. ಹಾಗಾಗಿ ಐಸಿಟಿಸಿ ಕೇಂದ್ರಗಳಲ್ಲಿ ಗರ್ಭಿಣಿಯರನ್ನು ಪರೀಕ್ಷೆ ಮಾಡಲಾಗುತ್ತದೆ. 2018-19ನೇ ಸಾಲಿನಲ್ಲಿ ಪರೀಕ್ಷೆಗೊಳಪಟ್ಟ 14.23ಲಕ್ಷ ಗರ್ಭಿಣಿಯರಲ್ಲಿ ಶೇ.0.05ರಷ್ಟು ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದೆ. ಕಳೆದ ವರ್ಷ ಶೇ.0.06 ರಷ್ಟು ಇತ್ತು. ಈ ಪ್ರಮಾಣ 2013-14ನೇ ಸಾಲಿನಲ್ಲಿ ಶೇ 0.12ರಷ್ಟಿತ್ತು.

ಕರ್ನಾಟಕಕ್ಕೆ ಒಂಭತ್ತನೇ ಸ್ಥಾನ: ಏಡ್ಸ್ ಸೋಂಕಿರುವ ರಾಜ್ಯಗಳಲ್ಲಿ ಕರ್ನಾಟಕವು ಒಂಭತ್ತನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಶೇ.90ಕ್ಕಿಂತ ಅಧಿಕ ಪ್ರಕರಣಗಳಲ್ಲಿ ಎಚ್‌ಐವಿ ಹರಡುವಿಕೆ ಸೋಂಕಿತ ವ್ಯಕ್ತಿ ಜತೆಗಿನ ಅಸುರಕ್ಷಿತ ಲೈಂಗಿಕ ಸಂಬಂಧವೇ ಕಾರಣವಾಗಿದೆ. ಹೀಗಾಗಿ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ರಾಜ್ಯದ ವಿವಿಧೆಡೆ ಕಾಂಡೋಮ್‌ಗಳನ್ನು ವಿತರಿಸುತ್ತಿದೆ. ಸರಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧೆಡೆ ಕಾಂಡೋಮ್‌ಗಳು ಉಚಿತವಾಗಿ ದೊರೆಯುತ್ತಿದೆ. ಸರಕಾರೇತರ ಸಂಸ್ಥೆಗಳು ಕೂಡಾ ಈ ಬಗ್ಗೆ ಜಾಗೃತಿ ಮೂಡಿಸಿ, ಕಾಂಡೋಮ್‌ಗಳನ್ನು ವಿತರಿಸುತ್ತಿವೆ. ರಾಜ್ಯದಲ್ಲಿ ಪ್ರತಿ ವರ್ಷ 3 ಕೋಟಿಗೂ ಅಧಿಕ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಳವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯು ತಿಳಿಸಿದೆ.

ಘೋಷ ವಾಕ್ಯದೊಂದಿಗೆ ಏಡ್ಸ್ ದಿನಾಚರಣೆ: ವಿಶ್ವದಾದ್ಯಂತ ಏಡ್ಸ್ ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಡಿ.1ಅನ್ನು ‘ವಿಶ್ವ ಏಡ್ಸ್ ದಿನ’ವನ್ನಾಗಿ ಘೋಷಿಸಿದೆ. ಈ ದಿನ ವಿಶ್ವದೆಲ್ಲಡೆ ವಿವಿಧ ಕಾರ್ಯಕ್ರಮಗಳ ಮೂಲಕ ಏಡ್ಸ್ ಸೋಂಕು ತಡೆಗಟ್ಟಲು ಜನಸಾಮಾನ್ಯದಲ್ಲಿ ಸೂಕ್ತ ಅರಿವು ಮೂಡಿಸಲಾಗುತ್ತದೆ. ಜತೆಗೆ ಮುಂದಿನ ಸವಾಲುಗಳ ಕುರಿತು ಚರ್ಚೆನಡೆಯುತ್ತದೆ. ಈ ಬಾರಿ ‘ಸಮುದಾಯಗಳು ಬದಲಾವಣೆಯನ್ನುಂಟು ಮಾಡುತ್ತವೆ’ ಎಂಬ ಘೋಷ ವಾಕ್ಯದೊಂದಿಗೆ ಏಡ್ಸ್ ದಿನ ಆಚರಿಸಲಾಗುತ್ತಿದೆ.

ರಾಜ್ಯದ ಸಮಗ್ರ ಆಪ್ತಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಪಟ್ಟವರು

ವರ್ಷ - ಪರೀಕ್ಷೆಗೊಳಪಟ್ಟವರು - ಧೃಡಪಟ್ಟಿರುವವರು ಪ್ರಮಾಣ (ಶೇ.)

2016-17 - 19,40,589 - 20,004 - 1.03

2017-18 - 22,20292 - 18,862 -0.85

2018-19 - 24,73845 - 18,143 - 0.73

2019- (ಏಪ್ರಿಲ್‌ನಿಂದ-ಅಕ್ಟೋಬರ್) - 14,47,590 - 9,504 - 0.63

Writer - -ಯುವರಾಜ್ ಮಾಳಗಿ

contributor

Editor - -ಯುವರಾಜ್ ಮಾಳಗಿ

contributor

Similar News