ಮೈತ್ರಿ ಸರಕಾರದ ಅವಧಿಯಲ್ಲಿ ಅತೀ ಹೆಚ್ಚು ರೈತರ ಆತ್ಮಹತ್ಯೆ: ಸಚಿವ ಆರ್.ಅಶೋಕ್

Update: 2019-11-30 18:11 GMT

ಮಂಡ್ಯ, ನ.30: ಉಪಚುನಾವಣೆಯಲ್ಲಿ ಎಲ್ಲಾ ಕಡೆ ನಮ್ಮ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಚುನಾವಣೆ ಬಳಿಕ ಬಿಜೆಪಿ ಸರಕಾರ ಸದೃಢವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಉಪಚುನಾವಣೆಯಾದರೂ ಸುಭದ್ರ ಸರಕ್ಕಾಗಿ ನಡೆಯುತ್ತಿರುವ ಚುನಾವಣೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಗೆದ್ದು ಮಂತ್ರಿ ಆಗುತ್ತಾರೆ. ಇದರಿಂದ ಕ್ಷೇತ್ರದ ಅಭಿವೃದ್ಧಿ ಆಗುತ್ತದೆ ಎಂದರು. 

2ನೇ ಸ್ಥಾನದಲ್ಲಿದ್ದ ಕಾಂಗ್ರೆಸ್, 3ನೇ ಸ್ಥಾನದಲ್ಲಿದ್ದ ಜೆಡಿಎಸ್‍ನವರು ಜನಾದೇಶಕ್ಕೆ ವಿರುದ್ಧವಾಗಿ ಅಪವಿತ್ರ ಮೈತ್ರಿ ಸರಕಾರ ಮಾಡಿದ್ದರು. ಅಭಿವೃದ್ಧಿ ಮಾಡದೆ, ಜನರ ಸಮಸ್ಯೆಗೆ ಆ ಸರಕಾರ ಸ್ಪಂದಿಸಲಿಲ್ಲ ಎಂದು ಅವರು ಟೀಕಿಸಿದರು. ಮೈತ್ರಿ ಸರಕಾರ ಬೀಳಿಸಿದ್ದು ಕಾಂಗ್ರೆಸ್ಸಿಗರು ಅಂತಾ ಕುಮಾರಸ್ವಾಮಿ, ದೇವೇಗೌಡ ಹೇಳಿದ್ದಾರೆ. ಈಗ ಅದನ್ನ ಬಿಜೆಪಿ ಮೇಲೆ ಹೊರಿಸಲು ಹೊರಟಿದ್ದಾರೆ. ಈಗ ಮತ್ತೆ ಈ ಎರಡೂ ಪಕ್ಷಗಳು ಒಂದಾಗಿ ಸರಕಾರ ಬೀಳಿಸಲು ಮುಂದಾಗಿವೆ ಎಂದು ಅವರು ಆರೋಪಿಸಿದರು. 

ಮಂಡ್ಯ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳು  ಮುಚ್ಚಲು ಜೆಡಿಎಸ್ ಕಾರಣ. ರಾಜ್ಯದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಜೆಡಿಎಸ್, ಮೈತ್ರಿ ಸರಕಾರದ ಕಾಲದಲ್ಲಿ ಎಂದು ಅವರು ಆಪಾದಿಸಿದರು. ಕಾಂಗ್ರೆಸ್ ಪಕ್ಷದಲ್ಲಿ ಒಳ ಜಗಳ ಅತಿಯಾಗಿದೆ. ಹಳಬರು, ಹೊಸಬರ ನಡುವೆ ಕಿತ್ತಾಟ ನಡೆಯುತ್ತಿದೆ. ಜೆಡಿಎಸ್‍ನ ಹಲವು ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರು ಪಕ್ಷ ತೊರೆಯಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.

ಡಿ.ಕೆ.ಶಿವಕುಮಾರ್ ಸದ್ಯ ಅತಂತ್ರ ಸ್ಥಿತಿಯಲ್ಲಿದ್ದಾರೆ. ಅವರ ಎಂಟ್ರಿಯಿಂದ ಏನೂ ಉಪಯೋಗವಿಲ್ಲ. ಅವರು ಎಲ್ಲಿ ಹೋದರೂ ಒಂದು ಸೇಬಿನಹಾರ ಹಾಕಿಸಿಕೊಳ್ಳೋದು ಅಷ್ಟೇ ಎಂದು ಅಶೋಕ್ ವ್ಯಂಗ್ಯವಾಡಿದರು.

ಕೆ.ಆರ್.ಪೇಟೆ ಬೇಲೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಜೆಡಿಎಸ್ ಕಾರ್ಯಕರ್ತರು ಹಲ್ಲೆ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ದೌರ್ಜನ್ಯ ಮಾಡೋದು ಜೆಡಿಎಸ್ ಮತ್ತು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News