ಮೂರ್ಖತನದ ಆರ್ಥಿಕ ನೀತಿಯಿಂದ ದೇಶದ ಜಿಡಿಪಿ ಕುಸಿತ: ದೀನೇಶ್ ಗುಂಡೂರಾವ್
ದಾವಣಗೆರೆ, ನ.30: ಮೂರ್ಖತನದ ಆರ್ಥಿಕ ನೀತಿಯಿಂದ ದೇಶದ ಜಿಡಿಪಿ ಕುಸಿದು ರುಪಾಯಿ ಮೌಲ್ಯ ಕುಸಿದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದೀನೇಶ್ ಗುಂಡೂರಾವ್ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿಯವರಿಗೆ ದೇಶ ನಡೆಸಲು ಬರುವುದಿಲ್ಲ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವಾಡುತ್ತಿದೆ. ದೇಶದಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಬಗೆಹರಿಸುವಲ್ಲಿ ವಿಫಲವಾಗಿದ್ದಾರೆ. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದರು.
ಬಿಜೆಪಿಯವರು ಏನು ತಪ್ಪು ಮಾಡಿಲ್ಲ ಎನ್ನುವಂತೆ ಮಾತನಾಡುತ್ತಿದ್ದಾರೆ. ಇಡೀ ದೇಶದಲ್ಲಿಯೇ ಇವರಂತಹ ಸತ್ಯವಂತರು ಇಲ್ಲ ಎನ್ನುವಂತೆ ಓಡಾಡುತ್ತಿದ್ದಾರೆ. ಬಿಜೆಪಿಯವರ ಅಡಿಯೋ, ವೀಡಿಯೋ ಎರಡನ್ನು ನೋಡಿದ್ದೇವೆ. ಜನರಿಗೆ ಗೊತ್ತಿದೆ, ಬಿಜೆಪಿಗೆ ಅಧಿಕಾರ ಮುಖ್ಯವೇ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ. ಬಿಜೆಪಿಯವರು ಜಾತಿ ಹೆಸರಲ್ಲಿ ಮತ ಕೇಳುವ ಮೂಲಕ ಕೆಟ್ಟ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯಿಂದ 2ನೇ ಅಪರೇಷನ್‍ಗೆ ಸಿದ್ದತೆ: ಡಿ.9 ರ ನಂತರ ರಾಜ್ಯದಲ್ಲಿ ಬಿಜೆಪಿ ಸರಕಾರ ಬಿದ್ದು ಹೋಗುವ ಭಯದಿಂದ ಮತ್ತೆ ಬಿಜೆಪಿ ಅಪರೇಷನ್ ಮಾಡಲು ಸಿದ್ದತೆ ನಡೆಸಿದೆ. ಯಾವ ಮಾರ್ಗದಿಂದಾದರೂ ಅಧಿಕಾರ ಹಿಡಿಯಬೇಕು ಎನ್ನುವುದು ಅವರ ಅಶಯವಾಗಿದೆ. ಮುಖ್ಯಮಂತ್ರಿ ರಾಜ್ಯದ ಜನರ ಋಣದಲ್ಲಿ ಇರಬೇಕು. ಅದರೆ ಅನರ್ಹ ಶಾಸಕರ ಋಣದಲ್ಲಿದ್ದೇವೆ ಎಂದು ಹೇಳುವ ಮೂಲಕ ಮತದಾರರಿಗೆ ಅವಮಾನ ಮಾಡುತ್ತಿದ್ದಾರೆ. ಇದುವರೆಗೂ ಸಹ ಬಿಜೆಪಿಗೆ ಬಹುಮತ ಇಲ್ಲ. ಜನರು ಬಿಜೆಪಿ ಹಾಗೂ ಅನರ್ಹ ಶಾಸಕರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಜನರು ಸ್ವಚ್ಚ ರಾಜಕಾರಣಕ್ಕೆ ಜನರು ಆಸೆ ಪಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಬಗ್ಗೆ ಏಕಾಂಗಿ ಎಂದು ಹೇಳಿದರು. ನನ್ನನ್ನು ಬಪೂನ್ ಎಂದು ಹೇಳಿದರು. ಅವರಿಗೆ ಇಷ್ಟ ಬಂದಂತೆ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ನಾವು ಮಾತನಾಡಿದರೆ ಚರ್ಚೆ ತಾರಕಕ್ಕೆ ಏರುತ್ತದೆ. ಅನರ್ಹ ಶಾಸಕರು ಅಡ್ವಾನ್ಸ್ ಶಾಸಕರು, ಅಡ್ವಾನ್ಸ್ ತೆಗೆದುಕೊಂಡು ಪಕ್ಷ ಬಿಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿಎಂ ಪ್ರಚಾರದಲ್ಲಿ ಅನರ್ಹ ಶಾಸಕರನ್ನು ಮಂತ್ರಿ, ಡಿಸಿಎಂ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಹೇಳಬಾರದು. ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ. ನಮ್ಮವರೇ ನಮಗೆ ಮೋಸ ಮಾಡಿದರು. ಇನ್ನು ನಾವು ಯಾವ ರೀತಿಯಾಗಿ ನಂಬಬೇಕು ಎಂದು ಪ್ರಶ್ನಿಸಿದರು.