ಸಿದ್ದರಾಮಯ್ಯ ಸಿಎಂ ಆಗುವ ಭ್ರಮೆಯಲ್ಲಿ ಹಗಲುಗನಸು ಕಾಣುತ್ತಿದ್ದಾರೆ: ಯಡಿಯೂರಪ್ಪ

Update: 2019-12-01 13:41 GMT

ಬೆಳಗಾವಿ, ಡಿ. 1: ‘ಉಪಚುನಾವಣೆ ಫಲಿತಾಂಶದ ಬಳಿಕ ಬಿಜೆಪಿ ಪರ ರಾಜಕೀಯ ಧ್ರುವೀಕರಣವಾಗಲಿದ್ದು, ನನ್ನ ನೇತೃತ್ವದ ಸರಕಾರ ಇನ್ನೂ ಮೂರುವರೆ ವರ್ಷ ಅಧಿಕಾರದಲ್ಲಿರಲಿದೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿವಾರ ಗೋಕಾಕ್ ಕ್ಷೇತ್ರದ ಅಂಕಲಗಿಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಪರವಾಗಿ ಪ್ರಚಾರ ಭಾಷಣ ಮಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಭ್ರಮೆಯಲ್ಲಿದ್ದು ಹಗಲುಗನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು.

ಸರಕಾರವೇ ಇರುತ್ತಿರಲಿಲ್ಲ: ರಮೇಶ್ ಜಾರಕಿಹೊಳಿ ತ್ಯಾಗ ಮಾಡದಿದ್ದರೆ ನನ್ನ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಸಾಧ್ಯವೇ ಇರಲಿಲ್ಲ. ನಾನು ಸಿಎಂ ಆಗುತ್ತಿರಲಿಲ್ಲ. ಹೀಗಾಗಿ ಅವರನ್ನು ಗೆಲ್ಲಿಸುವ ಮೂಲಕ ನನ್ನನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ರಮೇಶ್ ಜಾರಕಿಹೊಳಿ ಪ್ರಯತ್ನದಿಂದ ಉತ್ತರ ಕರ್ನಾಟಕ ಭಾಗದಲ್ಲಿ ಸರಕಾರ ಅಧಿಕಾರಕ್ಕೆ ಬಂದಿದೆ. ಅವರಿಗೆ ನೀಡುವ ಪ್ರತಿಯೊಂದು ಮತವೂ ನನಗೆ ನೀಡುವ ಮತದಂತೆ. ಗೋಕಾಕ್ ಸೇರಿ 15 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುವ ವಿಶ್ವಾಸವಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ರಮೇಶ್ ಜಾರಕಿಹೊಳಿ ಮಂತ್ರಿ ಆಗಬೇಕೆಂದಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲೇ ಇರುತ್ತಿದ್ದರು. ಆದರೆ, ಬಿಎಸ್‌ವೈ ಅವರನ್ನು ಮುಖ್ಯಮಂತ್ರಿ ಮಾಡಲಿಕ್ಕೆ ರಮೇಶ್ ಜಾರಕಿಹೊಳಿ ಅವರು ತನ್ನೊಂದಿಗೆ 17 ಮಂದಿ ಶಾಸಕರನ್ನು ರಾಜೀನಾಮೆ ಕೊಡಿಸಿದ್ದಾರೆಂದು ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News