ಹನಿಟ್ರ್ಯಾಪ್ ಪ್ರಕರಣದಲ್ಲಿ 9 ಅನರ್ಹ ಶಾಸಕರಿದ್ದಾರೆ: ಕುಮಾರಸ್ವಾಮಿ

Update: 2019-12-01 13:59 GMT

ಬೆಳಗಾವಿ, ಡಿ. 1: ಕೆಲ ಶಾಸಕರ ಹನಿಟ್ರ್ಯಾಪ್ ವಿಡಿಯೊಗಳ ಪ್ರಕರಣ ಬೆಳಕಿಗೆ ಬಂದಿದ್ದು, ಇದರಲ್ಲಿ 9 ಜನ ಅನರ್ಹ ಶಾಸಕರೇ ಇದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

ರವಿವಾರ ಗೋಕಾಕ್ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹನಿಟ್ರ್ಯಾಪ್ ಪ್ರಕರಣದಲ್ಲಿ ಬರೀ ಎರಡು ಅನರ್ಹ ಶಾಸಕರಲ್ಲ. ಬದಲಾಗಿ, ಒಂಭತ್ತು ಮಂದಿ ಇದ್ದಾರೆ. ಆದರೆ, ಈ ವಿಷಯವನ್ನಿಟ್ಟುಕೊಂಡು ಕೀಳು ಮಟ್ಟದ ರಾಜಕೀಯ ಮಾಡಲ್ಲ ಎಂದರು.

ಉಪಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಗೋಕಾಕ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿ ಸಚಿವರಾಗುವುದು ನಿಶ್ಚಿತ ಎಂದ ಅವರು, ಕಿಂಗ್ ಮೇಕರ್ ನಾನು ಅಥವಾ ಜೆಡಿಎಸ್ ಅಲ್ಲ ಎಂದು ಹೇಳಿದರು.

ಕ್ಷೇತ್ರದ ಹಿರೇನಂದಿ ಗ್ರಾಮವೊಂದರಲ್ಲೇ ರೈತರ 1.80 ಕೋಟಿ ರೂ.ಸಾಲಮನ್ನಾ ಆಗಿದೆ. ನಮ್ಮ ಅಭ್ಯರ್ಥಿ ದೊಡ್ಡ ಸಕ್ಕರೆ ಕಾರ್ಖಾನೆ ಕಟ್ಟಿಲ್ಲ, ರೈತರ ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡು ಸಾಹುಕಾರ್‌ ಗಿರಿ ಮಾಡುತ್ತಿಲ್ಲ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಲಿಂಬಾವಳಿ ಜತೆ ಬೇರೆ ಸಂಪರ್ಕ’

ಜೆಡಿಎಸ್ ಶಾಸಕರು ಸಂಪರ್ಕದಲ್ಲಿದ್ದಾರೆಂದು ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಹೇಳಿಕೆ ನೀಡಿದ್ದಾರೆ. ಆದರೆ, ಎಲ್ಲ ಶಾಸಕರು ಎಲ್ಲರ ಜೊತೆಯೂ ಸಂಪರ್ಕದಲ್ಲಿರುತ್ತಾರೆ. ಸದ್ಯ ಲಿಂಬಾವಳಿ ಜತೆಗೆ ಬೇರೆ ರೀತಿಯ ಸಂಕರ್ಪ ಇಟ್ಟುಕೊಳ್ಳದಿದ್ದರೆ ಸಾಕು ಎಂದು ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News