ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್‌ಗೆ ತಕ್ಕ ಪಾಠ ಕಲಿಸಿ: ಡಿ.ಕೆ.ಶಿವಕುಮಾರ್

Update: 2019-12-01 15:02 GMT

ಹಾವೇರಿ, ಡಿ.1: ಜಿಲ್ಲೆಯ ಹಿರೇಕೆರೂರು ಕ್ಷೇತ್ರದ ಜನತೆ ಹಾಗೂ ಸರಕಾರಿ ಅಧಿಕಾರಿಗಳನ್ನು ಕ್ರೂರವಾಗಿ ನೋಡುವ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ್ ಗೆ  ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಮನವಿ ಮಾಡಿದ್ದಾರೆ.

ರವಿವಾರ ಹಿರೇಕೆರೂರು ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬನ್ನಿಕೋಡ್ ಪರ ಪ್ರಚಾರ ಸಂದರ್ಭದಲ್ಲಿ ಮಾತನಾಡಿದ ಅವರು, ಬಿಎಸ್‌ವೈ ವಿರುದ್ಧ ಹಣದ ಆಮಿಷದ ಆರೋಪ ಮಾಡಿದ ಬಿ.ಸಿ.ಪಾಟೀಲ್ ಅವರಿಂದು ಕ್ಷೇತ್ರದ ಜನರ ಸ್ವಾಭಿಮಾನ ಮಾರಾಟ ಮಾಡಿ ಅದೇ ಯಡಿಯೂರಪ್ಪನವರ ಹಿಂದೆ ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಳೆದ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಾರದಿದ್ದಾಗ ಆತುರದಲ್ಲಿ ಯಡಿಯೂರಪ್ಪ ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು ಯತ್ನಿಸಿದ್ದರು. ಆಗ ಶ್ರೀರಾಮುಲು ಹಾಗೂ ಬಿ.ಸಿ.ಪಾಟೀಲ್ ನಡುವೆ ನಡೆದ ಫೋನ್ ಸಂಭಾಷಣೆ ರಾಜ್ಯದ ಜನರಿಗೆ ಗೊತ್ತು. ಅಂದು ರಾತ್ರಿಯೇ ಬಿ.ಸಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆವು. ರಾತ್ರಿ 2 ಗಂಟೆಗೆ ನಮ್ಮ ಅರ್ಜಿ ನೋಡಿದ ನ್ಯಾಯಾಲಯ 24 ಗಂಟೆ ಒಳಗೆ ಬಹುಮತ ಸಾಬೀತುಪಡಿಸಲು ಸೂಚಿಸಿತು. ಈ ವೇಳೆ ಬಿಜೆಪಿ ಒಡ್ಡಿದ್ದ ಆಮಿಷದ ಬಗ್ಗೆ ಪಾಟೀಲ್ ಅವರೇ ಹೇಳಿಕೆ ನೀಡಿದ್ದಾರೆ. ಈಗ ಮಂತ್ರಿಗಿರಿ ಆಸೆಗೆ ನಿಮ್ಮ ಮತವನ್ನು ಮಾರಾಟ ಮಾಡಿಕೊಂಡಿದ್ದಾರೆ ಎಂದು ಟೀಕಿಸಿದರು.

ಬಿಎಸ್‌ವೈ ಹಾಗೂ ಗೃಹ ಸಚಿವರು ಗುಪ್ತಚರ ಮಾಹಿತಿ ನೋಡಿ ದಂಗಾಗಿದ್ದಾರೆ. ಜನ ಅನಾರ್ಹರನ್ನು ಮನೆಗೆ ಕಳುಹಿಸುತ್ತಾರೆಂದು ಗೊತ್ತಾಗುತ್ತಿದ್ದಂತೆ ಕಂತೆಗಟ್ಟಲೆ ಹಣ ಬರುತ್ತಿದೆ. ಮತದಾರರೆ ಅವರು ಎಷ್ಟೇ ದುಡ್ಡು ಕೊಟ್ಟರೂ ತೆಗೆದುಕೊಳ್ಳಿ ಬಿಡಬೇಡಿ. ಮತವನ್ನು ಕಾಂಗ್ರೆಸ್‌ಗೆ ಹಾಕಿ. ಬಿಜೆಪಿ ನೋಟು ಕಾಂಗ್ರೆಸ್‌ಗೆ ವೋಟು ಮರೆಯಬೇಡಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News