ಮಂಡ್ಯ: ವೈದ್ಯೆಯ ಅತ್ಯಾಚಾರ, ಹತ್ಯೆ ಆರೋಪಿಗಳ ಗಲ್ಲಿಗೇರಿಸಲು ಒತ್ತಾಯಿಸಿ ಹೆದ್ದಾರಿ ತಡೆ

Update: 2019-12-01 16:59 GMT

ಮಂಡ್ಯ, ಡಿ.1: ತೆಲಂಗಾಣದಲ್ಲಿ ಪಶು ವೈದ್ಯೆ ಪ್ರಿಯಾಂಕ ರೆಡ್ಡಿ ಅವರ ಅತ್ಯಾಚಾರ, ಹತ್ಯೆ ಆರೋಪಿಗಳನ್ನು ಗಲ್ಲಿಗೇರಿಸಲು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮದ್ದೂರಿನಲ್ಲಿ ರವಿವಾರ ಹೆದ್ದಾರಿ ಸಂಚಾರ ತಡೆ ನಡೆಸಿದರು.

ಈ ಕೃತ್ಯ ನಾಗರಿಕ ಸಮಾಜ ತಲೆತಗ್ಗಿಸುವಂತಹದ್ದು ಎಂದು ಕಿಡಿಕಾರಿದ ಪ್ರತಿಭಟನಾಕಾರರು, ಆರೋಪಿಗಳನ್ನು ಗಲ್ಲಿಗೇರಿಸುವ ಅಣಕು ಪ್ರದರ್ಶನ ಮಾಡಿ  ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‍ಗೌಡ ಮಾತನಾಡಿ, ತೆಲಂಗಾಣದಲ್ಲಿ ಇತ್ತೀಚೆಗೆ ಇಬ್ಬರು ಮಹಿಳಾ ಅಧಿಕಾರಿಗಳ ಹತ್ಯೆ ಹಾಗೂ ಮಹಿಳಾ ಅಧಿಕಾರಿ ಅತ್ಯಾಚಾರ ಆತಂಕ ಹುಟ್ಟಿಸುವಂತಹದ್ದು, ಮಹಿಳೆಯರಿಗೆ ಯಾವುದೇ ರಕ್ಷಣೆ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ದೇಶದ ಯಾವುದೇ ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ಹಾಗೂ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕೇಂದ್ರ ಸರಕಾರ ಹಾಗೂ ಗೃಹ ಇಲಾಖೆ ಅಗತ್ಯ ಕ್ರಮ ಕೈಗೊಂಡು ಮಹಿಳೆಯರ ರಕ್ಷಣೆಗೆ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.

ದೆಹಲಿಯಲ್ಲಿ ನಡೆದ ನಿರ್ಭಯ ಪ್ರಕರಣ ವೇಳೆ 3,200 ಕೋಟಿ ರೂ.ಗಳ ನಿಧಿಯನ್ನು ಮೀಸಲಿಟ್ಟಿದ್ದು, ಈ ನಿಧಿಯ ಹಣ ಯಾವ ರಾಜ್ಯದಲ್ಲೂ ಬಳಕೆಯಾಗಿಲ್ಲದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಈ ಹಣ ಎಲ್ಲಿಗೆ ಹೋಯಿತು ಎಂಬುವುದನ್ನು ಕೇಂದ್ರ ಸರಕಾರ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ವಿ.ಸಿ.ಉಮಾಂಶಕರ್, ತಾಲೂಕು ಅಧ್ಯಕ್ಷ ತಿಪ್ಪೂರು ರಾಜೇಶ, ರಂಜಿತ್‍ಗೌಡ, ಶ್ರೀಧರ್, ಮಹಾಲಿಂಗು, ಉಮೇಶ್, ಕುಮಾರ್, ಶೀನಪ್ಪ, ವೀರಪ್ಪ, ಬಾಬು, ಯೂಕೂಬ್, ಬಾಬು, ಜ್ಯೀತಿ, ಸುಜಾತ, ಉಮೇಶ್, ಇತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News