×
Ad

ಉಪಚುನಾವಣೆ ಬಿಜೆಪಿಗೆ ಅಗ್ನಿ ಪರೀಕ್ಷೆ: ಸಚಿವ ಶ್ರೀರಾಮುಲು

Update: 2019-12-01 22:32 IST

ಮಂಡ್ಯ, ಡಿ.1: ಉಪಚುನಾವಣೆ ರಾಜ್ಯದ ಬಿಜೆಪಿಗೆ ಅಗ್ನಿ ಪರೀಕ್ಷೆಯಾಗಿದೆ. ನಮ್ಮ ಸರಕಾರದ ಅಳಿವು ಉಳಿವಿನ ಪ್ರಶ್ನೆ ಇದಾಗಿದೆ ಎಂದು ಸಚಿವ ಶ್ರೀರಾಮುಲು ಆತಂಕ ವ್ಯಕ್ತಪಡಿಸಿದ್ದಾರೆ.

ಕೆ.ಆರ್.ಪೇಟೆಯಲ್ಲಿ ರವಿವಾರ ಬಿಜೆಪಿ ಪರ ವಾಲ್ಮೀಕಿ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ನಾರಾಯಣಗೌಡರ ತ್ಯಾಗದಿಂದ ನಮ್ಮ ಸರಕಾರ ನಡೆಯುತ್ತಿದೆ. ವಾಲ್ಮೀಕಿ ಸಮುದಾಯ ಕೈಬಿಡಬಾರದು ಎಂದು ಮನವಿ ಮಾಡಿದರು.

ರಕ್ತದಲ್ಲಿ ಬರೆದುಕೊಡುತ್ತೇನೆ, ನಮ್ಮ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗಲು ನಾನು ಬಿಡುವುದಿಲ್ಲ. ತಳವಾರ, ಪರಿವಾರ ಸಮುದಾಯಕ್ಕೆ ಸರ್ಟಿಫಿಕೇಟ್, ಏಳೂವರೆ ಶೇಕಡಾ ಮೀಸಲಾತಿ ಕೊಟ್ಟೇ ಕೊಡಿಸುತ್ತೇನೆ ಎಂದೂ ಅವರು ಭರವಸೆ ನೀಡಿದರು.

ಉಪಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಳ ಒಪ್ಪಂದ ಮಾಡಿಕೊಂಡಿವೆ. ಮತ್ತೆ ಮೈತ್ರಿ ಸರಕಾರ ಬರುತ್ತೆ ಅನ್ನೋದು ತಿರುಕನ ಕನಸು. ಕಾಂಗ್ರೆಸ್, ಜೆಡಿಎಸ್ ಎರಡೂ ಅವಧಿ ಮುಗಿದ ಪಕ್ಷಗಳು ಎಂದೂ ಅವರು ವ್ಯಂಗ್ಯವಾಡಿದರು.

ಕಾಂಗ್ರೆಸ್, ಜೆಡಿಎಸ್ ಮತ್ತೆ ಎಂದಿಗೂ ಅಧಿಕಾರಕ್ಕೆ ಬರಲಾರವು. ಬಿಜೆಪಿ ಒಂದೇ ಸದೃಢವಾದ ಪಕ್ಷ. ಮೈತ್ರಿ ಸರಕಾರದ ಸಿಎಂ ಆದವರು ಶಾಸಕರಿಗೆ, ಜನರಿಗೆ ಸಿಗುತ್ತಿರಲಿಲ್ಲ. ಅವರವರೇ ಕಿತ್ತಾಡಿಕೊಂಡು ಸರಕಾರ ಪತನವಾಯಿತು ಎಂದು ಅವರು ಟೀಕಿಸಿದರು.

ಕೆ.ಆರ್.ಪೇಟೆ ಕ್ಷೇತ್ರದ ಫಲಿತಾಂಶ ರಾಜ್ಯಕ್ಕೆ ದಿಕ್ಸೂಚಿ: ಡಾ.ಅಶ್ವಥ್ ನಾರಾಯಣ 

ಕೆ.ಆರ್.ಪೇಟೆ ಕ್ಷೇತ್ರದ ಚುನಾವಣೆ ಫಲಿತಾಂಶ ರಾಜ್ಯಕ್ಕೆ ದಿಕ್ಸೂಚಿಯಾಗಲಿದೆ. ಬಿಜೆಪಿ ಅಭ್ಯರ್ಥಿಗೆ ಮತ ನೀಡಿದರೆ ಒಬ್ಬ ಸಚಿವನಿಗೆ ಮತ ನೀಡಿದಂತೆ. ಬಿಜೆಪಿ ಗೆಲ್ಲಿಸಿ ಸಿಎಂ ಯಡಿಯೂರಪ್ಪ ಅವರ ಗೌರವ ಹೆಚ್ಚಿಸಿ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಮನವಿ ಮಾಡಿದರು.

ಬಿಜೆಪಿ ಎಲ್ಲಾ ಜಾತಿ, ಜನಾಂಗಕ್ಕೂ ಸಲ್ಲುವ ಪಕ್ಷ. ವಾಲ್ಮೀಕಿ, ಕನಕ ಜಯಂತಿ ಆಚರಣೆ ಮಾಡಿದ್ದು ಬಿಜೆಪಿ ಸರಕಾರ.  ವಾಲ್ಮೀಕಿ ಸಮುದಾಯದವರ ಕಷ್ಟ, ಬೇಡಿಕೆ ಈಡೇರಿಸಲು ನಾವು ಸದಾ ಸಿದ್ಧರಿದ್ದೇವೆ ಎಂದು ಅವರು ಅಭಯ ನೀಡಿದರು.

ದೇವೇಗೌಡ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ, ಎರಡು ಬಾರಿ ಶಾಸಕನನ್ನಾಗಿ ಮಾಡಿದ್ದರು. ಬಿ.ಫಾರಂ ಕೊಡುವುದರಿಂದ ಹಿಡಿದು ಇಲ್ಲಿವರೆಗೂ ತುಂಬಾ ಹಿಂಸೆ ಕೊಟ್ಟರು ಎಂದು ದೂರಿದರು.

ಕುಮಾರಣ್ಣರೊಬ್ಬರನ್ನು ಬಿಟ್ಟು ಅವರ ಕುಟುಂಬದ ಎಲ್ಲರೂ ನನ್ನ ಸೋಲಿಗೆ ಪಣ ತೊಟ್ಟಿದ್ದರು. ಈಗ ಅಭ್ಯರ್ಥಿಯಾಗಿರೋ ವ್ಯಕ್ತಿಯ ನೇತೃತ್ವದಲ್ಲಿ ಗುಂಪು ಕಟ್ಟಿದ್ದರು. ಬರ ನಿರ್ವಹಣ ಫೈಲ್‍ಗೆ ಕುಮಾರಣ್ಣ ಸಹಿಹಾಕಿದರು. ಆದರೆ, ಮರು ದಿನವೇ ಆ ಫೈಲ್ ಕಾಣಲಿಲ್ಲ ಎಂದು ಅವರು ಆರೋಪಿಸಿದರು. ನನ್ನ ಕ್ಷೇತ್ರದಲ್ಲಿ ಸಚಿವರಾಗಿದ್ದ ಪುಟ್ಟರಾಜು, ಎಚ್.ಡಿ.ರೇವಣ್ಣ ಹಸ್ತಕ್ಷೇಪ ಇತ್ತು. ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಯಾರು ಕಮೀಷನ್ ಪಡೆದಿದ್ದಾರೆ ಎಂಬುದು ಗೊತ್ತಾಗುತ್ತೆ ಎಂದು ಪರೋಕ್ಷವಾಗಿ ರೇವಣ್ಣ ಅವರಿಗೆ ಸವಾಲು ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News