ವಾಯುಭಾರ ಕುಸಿತ: ಕೊಡಗು ಜಿಲ್ಲೆಯ ವಿವಿಧೆಡೆ ಉತ್ತಮ ಮಳೆ

Update: 2019-12-01 17:45 GMT

ಮಡಿಕೇರಿ, ಡಿ.1: ಅರಬ್ಬೀ ಸಮುದ್ರ ಮತ್ತು ಹಿಂದೂ ಮಹಾಸಾಗರದ ಮಧ್ಯೆ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕೊಡಗು ಜಿಲ್ಲೆಯ ಮೇಲೂ ಬೀರಿದ್ದು, ಭಾನುವಾರ ಅಪರಾಹ್ನದಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗುತ್ತಿದೆ. 

ಜಿಲ್ಲಾ ಕೇಂದ್ರ ಮಡಿಕೇರಿ ಸೇರಿದಂತೆ ಕೊಡಗಿನ ಬಹುತೇಕ ಕಡೆಗಳಲ್ಲಿ ಭಾನುವಾರ ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದರೆ, ದಕ್ಷಿಣ ಕೊಡಗಿನ ವೀರಾಜಪೇಟೆ, ಗೋಣಿಕೊಪ್ಪ ಮತ್ತಿತರ ಪ್ರದೇಶಗಳಲ್ಲಿ ಮಧ್ಯಾಹ್ನದಿಂದಲೇ ತುಂತುರು ಮಳೆಯಾಗತೊಡಗಿತ್ತು. ಸಂಜೆ ವೇಳೆಗೆ ಮಳೆ ತೀವ್ರತೆ ಪಡೆದುಕೊಂಡಿತು. ಸಂಜೆ 5 ಗಂಟೆಯ ಬಳಿಕ ಜಿಲ್ಲೆಯ ಬಹುತೇಕ ಭಾಗದಲ್ಲಿ ಹಗುರದಿಂದ ಸಾಧಾರಣ ಮಳೆಯಾಗಿದ್ದರೆ, ಮತ್ತೆ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದೆ.

ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಇನ್ನೂ ಎರಡು ದಿನಗಳ ಕಾಲ ಕೊಡಗು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿರುವುದಾಗಿ ಹೇಳಲಾಗಿದ್ದು, ಇದರಿಂದಾಗಿ ಕೊಡಗು ಜಿಲ್ಲೆಯಲ್ಲಿ ಕಾಫಿ ಹಾಗೂ ಭತ್ತದ ಬೆಳೆಗಾರರು ಚಿಂತೆಗೆ ಈಡಾಗಿದ್ದಾರೆ. ಈಗಾಗಲೇ ಕಾಫಿ ಕೊಯ್ಲು ಆರಂಭವಾಗಿದ್ದು, ಮಳೆಯಿಂದಾಗಿ ಕಾಫಿ ಒಣಗಿಸಲು ಸಾಧ್ಯವಾಗದೆ ಚಿಂತಿತರಾಗಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಸುರಿದ ಮಹಾಮಳೆಯಿಂದಾಗಿ ಈಗಾಗಲೇ ಕಾಫಿ, ಕರಿಮೆಣಸು ಸೇರಿದಂತೆ ವಾಣಿಜ್ಯ ಬೆಳೆ ಕೈಕೊಟ್ಟಿದ್ದು, ಅದೃಷ್ಟವಶಾತ್ ಉಳಿದಿದ್ದ ಅಲ್ಪಸ್ವಲ್ಪ ಬೆಳೆಯೂ ಇದೀಗ ಅಕಾಲಿಕ ಮಳೆಯಿಂದಾಗಿ ಕೈತಪ್ಪುವುದರೊಂದಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಸುಂಟಿಕೊಪ್ಪ ವರದಿ: ನವಂಬರ್ ಎರಡನೇ ವಾರದಿಂದ ಬಿಡುವು ನೀಡಿದ್ದ ಮಳೆ ಭಾನುವಾರದಿಂದ ಮತ್ತೆ ಆರಂಭವಾಗಿದ್ದು, ಭಾನುವಾರ ಸಂತೆ ದಿನವಾಗಿದ್ದರಿಂದ ವಾರದ ಸಂತೆಗಾಗಿ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು, ಸಂತೆಯ ವ್ಯಾಪಾರಿಗಳು ಸಂಜೆ ಸುರಿದ ಭಾರೀ ಮಳೆಯಲ್ಲಿ ಪರದಾಡುವಂತಾಯಿತು. 

ಕಾಫಿ ತೋಟಗಳಲ್ಲಿ  ಕೊಯ್ಲು ನಡೆಯುತ್ತಿದ್ದು ಬೆಳೆಗಾರರು ಕೊಯ್ದು ಕಾಫಿಯನ್ನು ಒಣಗಿಸಲು ಪರದಾಡುವಂತಾಗಿದೆ. ಅರೇಬಿಕಾ ಕಾಫಿಯನ್ನು ಬಿಸಿಲಿನ ಅಭಾವದಿಂದ ಒಣಗಿಸಲಾಗದೆ ಸುರಿಯುತ್ತಿರುವ ಮಳೆ ಪರಿಣಾಮ ಬೀರಲಿದ್ದು, ಭತ್ತದ ತೆನೆ ಒಡೆಯುವ ಈಗ ಭತ್ತ ಜಳ್ಳಾಗುವ ಎಲ್ಲಾ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News