ವೈದ್ಯೆಯ ಅತ್ಯಾಚಾರ, ಕೊಲೆ: ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಶಿವಮೊಗ್ಗದಲ್ಲಿ ಧರಣಿ

Update: 2019-12-02 12:23 GMT

ಶಿವಮೊಗ್ಗ, ಡಿ. 2: ತೆಲಂಗಾಣದಲ್ಲಿ ಪಶುವೈದ್ಯೆ ಪ್ರಿಯಾರೆಡ್ಡಿ ಎಂಬವರ ಮೇಲೆ ಅತ್ಯಾಚಾರ ಎಸಗಿ ಜೀವಂತವಾಗಿ ಸುಟ್ಟು ಪೈಶಾಚಿಕ ಕೃತ್ಯ ಎಸಗಿದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ, ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎನ್‍ಎಸ್‍ಯುಐ ಹಾಗೂ ಗಂಧದ ಗುಡಿ ಸಂಘಟನೆಯ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದವು. 

ಎನ್‍ಎಸ್‍ಯುಐ: ಇತ್ತೀಚೆಗೆ ದೇಶದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಕಾಮುಕರಿಂದ ರಕ್ಷಣೆಯಿಲ್ಲದಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ, ತೆಲಂಗಾಣದಲ್ಲಿ ಪಶುವೈದ್ಯೆ ಪ್ರಿಯಾ ರೆಡ್ಡಿಯವರ ಘಟನೆ ಸಾಕ್ಷಿಯಾಗಿದೆ. ಈ ಅನಾಗರಿಕ ಕೃತ್ಯವು, ದೇಶದ ಜನ ತಲೆ ತಗ್ಗಿಸುವಂತೆ ಮಾಡಿದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. 

ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ ಹಾಗೂ ದೌರ್ಜನ್ಯ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು. ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆ ವಿಧಿಸಲು ಕಾನೂನಿನಲ್ಲಿ ತಿದ್ದುಪಡಿ ಮಾಡಬೇಕು. ಭವಿಷ್ಯದಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಎಚ್ಚರ ವಹಿಸಬೇಕು ಎಂದು ಎನ್‍ಎಸ್‍ಯುಐ ಸಂಘಟನೆ ಆಗ್ರಹಿಸಿದೆ. ಪ್ರತಿಭಟನೆಯಲ್ಲಿ ಬಾಲಾಜಿ, ಕೆ. ಚೇತನ್ ಸೇರಿದಂತೆ ಮೊದಲಾದವರಿದ್ದರು. 

ಫೌಂಡೇಷನ್: ಈ ಘಟನೆಯು ಅತ್ಯಂತ ಪೈಶಾಚಿಕವಾಗಿದೆ. ನಾಗರಿಕ ಸಮಾಜವೇ ಬೆಚ್ಚಿ ಬೀಳುವಂತೆ ಮಾಡಿದೆ. ಪ್ರಕರಣದ ವಿಚಾರಣೆ ತ್ವರಿತಗತಿಯಲ್ಲಿ ನಡೆಸಬೇಕು. ಆರೋಪಿಗಳನ್ನು ಗಲ್ಲಿಗೇರಿಸಬೇಕು. ಭವಿಷ್ಯದಲ್ಲಿ ಈ ರೀತಿಯ ಘಟನೆಗಳಿಗೆ ಆಸ್ಪದವಾಗದಂತೆ ಕೇಂದ್ರ-ರಾಜ್ಯ ಸರ್ಕಾರಗಳು ಕಠಿಣ ಕಾನೂನು ರೂಪಿಸಿ ಜಾರಿಗೊಳಿಸಬೇಕು ಎಂದು ಗಂಧದ ಗುಡಿ ಫೌಂಡೇಷನ್ ಆಗ್ರಹಿಸಿದೆ. 

ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ವೇಣುಗೋಪಾಲ್, ಕುಶಾಲ್, ಹೇಮಂತ್, ಭರತ್, ಪ್ರಹ್ಲಾದ್ ಮಾರುತಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News