ಶಿವಮೊಗ್ಗದಲ್ಲಿ ಅಕಾಲಿಕ ಮಳೆ: ರೈತರಲ್ಲಿ ಆತಂಕದ ಕರಿಛಾಯೆ

Update: 2019-12-02 12:41 GMT
ಸಾಂದರ್ಭಿಕ ಚಿತ್ರ

ಶಿವಮೊಗ್ಗ, ಡಿ. 2: ಹವಮಾನ ವೈಪರೀತ್ಯದಿಂದ ಮಲೆನಾಡು ಭಾಗದಲ್ಲಿ ದಿಢೀರ್ ಆಗಿ ಬೀಳುತ್ತಿರುವ ಅಕಾಲಿಕ ಮಳೆಯು ರೈತ ಸಮೂಹದಲ್ಲಿ ಆತಂಕದ ಕರಿಛಾಯೆ ಆವರಿಸುವಂತೆ ಮಾಡಿದೆ. 

ಭಾನುವಾರ ರಾತ್ರಿ ಬಹುತೇಕ ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗಿದೆ. ಕೆಲವೆಡೆ ಧಾರಾಕಾರ ವರ್ಷಧಾರೆಯಾಗಿರುವ ವರದಿಗಳು ಬಂದಿವೆ. ಸೋಮವಾರ ಕೂಡ ಮೋಡ ಕವಿದ ವಾತಾವರಣ ಮುಂದುವರಿದಿತ್ತು.

ಆತಂಕ: ಅಕಾಲಿಕ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಅಡಚಣೆ ಉಂಟಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಹಾಳಾಗುವ ಭೀತಿಯಲ್ಲಿ ರೈತ ಸಮೂಹವಿದೆ. ಹಲವೆಡೆ ಮಳೆಯಿಂದ ಬಿಸಿಲಿಗೆ ಒಣಗಲು ಹಾಕಿದ್ದ ಭತ್ತ, ಮೆಕ್ಕೆಜೋಳ ಬೆಳೆ ನೆನೆದು ಹೋಗಿದೆ. ಇನ್ನೊಂದೆಡೆ ಕಟಾವಿಗೆ ಬಂದಿರುವ ಭತ್ತ, ಮೆಕ್ಕೆಜೊಳ ಬೆಳೆಗಳಿಗೆ ಮಳೆಯು ಸಂಕಷ್ಟ ತಂದೊಡ್ಡಿದೆ. 

ಮೆಕ್ಕೆಜೋಳ ಹಾಗೂ ಭತ್ತ ಕಟಾವು ಮಾಡಿ ಒಣಗಲು ಹಾಕಿದ್ದ ರೈತರಿಗೆ, ಅಕಾಲಿಕ ಮಳೆಯು ತೀವ್ರ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಟಾರ್ಪಲ್, ಪ್ಲಾಸ್ಟಿಕ್ ಚೀಲ ಹೊದಿಸಿ ರಕ್ಷಣೆ ಮಾಡುತ್ತಿದ್ದಾರೆ. 

ಅಡ್ಡಿ: ಕಳೆದ ಆಗಸ್ಟ್ ನಿಂದ ಜಿಲ್ಲೆಯಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸುಮಾರು ಒಂದೂವರೆ ತಿಂಗಳಿನಿಂದ ಜಿಲ್ಲೆಯಾದ್ಯಂತ ಮಳೆಯ ಪ್ರಮಾಣ ಕಡಿಮೆಯಾಗಿದೆ. 

ಸದ್ಯ ಜಿಲ್ಲೆಯಾದ್ಯಂತ ಭತ್ತ, ಮೆಕ್ಕೆಜೋಳ ಬೆಳೆಯ ಕಟಾವು ಕಾರ್ಯ ಭರದಿಂದ ಸಾಗುತ್ತಿದೆ. ಆದರೆ ಅಕಾಲಿಕ ಮಳೆಯು ಕೊಯ್ಲು ಕಾರ್ಯಕ್ಕೆ ತೀವ್ರ ಅಡಚಣೆ ಉಂಟು ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News