ಲಿಂಗಾಯತರು ಇತರರಿಗೆ ಮತ ಹಾಕುವುದು ಬಿಎಸ್‌ವೈಯ ಕೆನ್ನೆಗೆ ಹೊಡೆದಂತೆ: ಸಚಿವ ಮಾಧುಸ್ವಾಮಿ

Update: 2019-12-02 13:45 GMT

ಹೊಸಪೇಟೆ, ಡಿ.2: ವೀರಶೈವ, ಲಿಂಗಾಯತ ಸಮುದಾಯದ ಮಂದಿ, ಬೇರೆಯವರಿಗೆ ಮತ ಹಾಕಿದರೆ, ಅದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆದಂತೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದ್ದಾರೆ.

ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ, ವೀರಶೈವ ಲಿಂಗಾಯತ ಸಮುದಾಯದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ವೀರಶೈವ, ಲಿಂಗಾಯತ ಸಮುದಾಯದ ಒಂದು ಮತ ಸಹ ಬಿಜೆಪಿ ಪಕ್ಷಕ್ಕೆ ಬಿಟ್ಟು, ಬೇರೆ ಪಕ್ಷದ ಅಭ್ಯರ್ಥಿಗೆ ಹೋಗಬಾರದು. ಒಂದು ವೇಳೆ, ಬೇರೆಯವರಿಗೆ ಮತ ಬಿದ್ದರೆ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೆನ್ನೆಗೆ ಹೊಡೆದಂತೆ. ಅವರಿಗೆ ಕಲ್ಲು ಹೊಡೆದು ಅಪಮಾನ ಮಾಡಿದಂತೆ ಎಂದು ತಿಳಿಸಿದರು.

ವೀರೇಂದ್ರ ಪಾಟೀಲ್ ಅವರು 180 ಸೀಟುಗಳನ್ನು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆದರೆ, ಒಂದು ವರ್ಷಕ್ಕೆ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲಾಯಿತು. ಈಗ ಅಂತಹದ್ದು ಮತ್ತೆ ಆಗಬಾರದು. ನಿಜಲಿಂಗಪ್ಪನವರಿಂದ ಇಲ್ಲಿಯವರೆಗಿನ ಲಿಂಗಾಯತ ನಾಯಕರಿಗೆ ಆದ ಸ್ಥಿತಿ ಯಡಿಯೂರಪ್ಪನವರಿಗೆ ಆಗಬಾರದು ಎಂದು ಹೇಳಿದರು.

ಅನರ್ಹ ಶಾಸಕರ ತ್ಯಾಗದಿಂದ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾರೆ. ಅವರು ಅದೇ ಸ್ಥಾನದಲ್ಲಿ ಮುಂದುವರೆಯಬೇಕಾದರೆ ಸಮಾಜ ಅನರ್ಹರನ್ನು ಗೆಲ್ಲಿಸಬೇಕು ಎಂದ ಅವರು, ಯಡಿಯೂರಪ್ಪ, ಲಿಂಗಾಯತ ಸಮಾಜದ ಮಾಣಿಕ್ಯವಿದ್ದಂತೆ. ಅದು ಒಂದು ಸಲ ಕೆಳಗೆ ಬಿದ್ದರೆ ಮತ್ತೆ ಜೋಡಿಸಲು ಆಗುವುದಿಲ್ಲ ಎಂದು ಮಾಧುಸ್ವಾಮಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News