ಕುತೂಹಲಕ್ಕೆ ಕಾರಣವಾದ ಡಿಕೆಶಿ-ಕುಮಾರಸ್ವಾಮಿ ಭೇಟಿ

Update: 2019-12-02 14:21 GMT
ಕುಮಾರಸ್ವಾಮಿ- ಡಿ.ಕೆ.ಶಿವಕುಮಾರ್ (ಫೈಲ್ ಚಿತ್ರ)

ಹುಬ್ಬಳ್ಳಿ, ಡಿ. 2: ಹದಿನೈದು ಕ್ಷೇತ್ರಗಳ ಉಪಚುನಾವಣೆ ಮತದಾನಕ್ಕೆ ಕ್ಷಣಗಣನೆ ಆರಂಭವಾಗಿರುವ ಸಂದರ್ಭದಲ್ಲೆ ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಭೇಟಿ ಮಾಡಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮರು ಮೈತ್ರಿ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೆ ಉಭಯ ನಾಯಕರ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ.

ಉಪಚುನಾವಣೆ ಪ್ರಚಾರಕ್ಕಾಗಿ ಬೆಳಗಾವಿಯಿಂದ ಚಿಕ್ಕಬಳ್ಳಾಪುರಕ್ಕೆ ತೆರಳುವ ವೇಳೆ ಹವಾಮಾನ ವೈಪರೀತ್ಯದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಬೆಂಗಳೂರಿಗೆ ತೆರಳಬೇಕಿದ್ದ ಡಿ.ಕೆ.ಶಿವಕುಮಾರ್ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ್ದಾರೆ. ಇದೊಂದು ಆಕಸ್ಮಿಕ ಭೇಟಿಯಷ್ಟೇ ಎಂದು ಬಿಂಬಿಸಲಾಗುತ್ತಿದೆ. ಆದರೆ, ಇಬ್ಬರು ನಾಯಕರು ಪೂರ್ವನಿಯೋಜಿತವಾಗಿಯೇ ಸಮಯ ನಿಗದಿ ಮಾಡಿಕೊಂಡು ಭೇಟಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

‘ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆಗಳಾಗುತ್ತವೆ’ ಎಂಬ ಕಾಂಗ್ರೆಸ್-ಜೆಡಿಎಸ್ ಮುಖಂಡರ ಹೇಳಿಕೆ ಬೆನ್ನಲ್ಲೆ ಎಚ್‌ಡಿಕೆ-ಡಿಕೆಶಿ ಭೇಟಿ ಮತ್ತಷ್ಟು ಕುತೂಹಲವನ್ನು ಸೃಷ್ಟಿಸಿದೆ. ಒಂದು ಗಂಟೆಗೂ ಹೆಚ್ಚುಕಾಲ ಇಬ್ಬರೂ ಚರ್ಚಿಸಿರುವುದು ವಿರೋಧಿಗಳಲ್ಲಿ ದುಗುಡ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News