ವಿಚ್ಛೇದನದ ಬಳಿಕ ಪುನಃ ಒಂದಾಗಲು ಕಾಂಗ್ರೆಸ್-ಜೆಡಿಎಸ್ ಸಿದ್ಧತೆ: ಶ್ರೀರಾಮುಲು ವ್ಯಂಗ್ಯ

Update: 2019-12-02 16:08 GMT

ಬೆಂಗಳೂರು, ಡಿ.2: ಅಧಿಕಾರ ಇದ್ದಾಗ ಕಾಂಗ್ರೆಸ್-ಜೆಡಿಎಸ್ ನಾಯಕರು ಕಿತ್ತಾಡಿಕೊಂಡು ವಿಚ್ಛೇದನ ತೆಗೆದುಕೊಂಡರು. ಈಗ ಮತ್ತೆ ಪುನಃ ಮದುವೆ ಮಾಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯರನ್ನ ಹೊರಗಿಟ್ಟು ಸರಕಾರ ಮಾಡುತ್ತೇವೆ ಅಂತಿದ್ದಾರೆ. ಅದೆಲ್ಲಾ ಆಗುವ ಮಾತಾ ನೀವೇ ಹೇಳಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ವ್ಯಂಗ್ಯವಾಡಿದ್ದಾರೆ.

ಸೋಮವಾರ ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರವಾಗಿ ರೋಡ್ ಶೋ ನಡೆಸುವ ಮೂಲಕ ಮತ ಯಾಚನೆ ಮಾಡುತ್ತಾ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರವೇ ಮುಂದುವರಿಯಲಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.

ಸುಧಾಕರ್ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾಗ ಅವರನ್ನು ಹೇಗೆ ನಡೆಸಿಕೊಂಡರು. ಚಿಕ್ಕಬಳ್ಳಾಪುರ ಜಿಲ್ಲೆ ಅಭಿವೃದ್ಧಿಯಾಗಬಾರದೇ? ಗಡಿ ಭಾಗದಲ್ಲಿರುವ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಸುಧಾಕರ್ ಸಾಕಷ್ಟು ಶ್ರಮಿಸಿದ್ದಾರೆ. ಈ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದು ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ಪಡೆದುಕೊಂಡಿದ್ದರು. ಆದರೆ, ಆ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದು ಏಕೆ? ಇಲ್ಲಿನ ಮಕ್ಕಳು ಉನ್ನತ ವಿದ್ಯಾಭ್ಯಾಸ ಪಡೆಯಬಾರದೇ? ಎಂದು ಅವರು ಪ್ರಶ್ನಿಸಿದರು.

ಇಲ್ಲಿನ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಬಿಜೆಪಿ ಸರಕಾರ ಚಿಕ್ಕಬಳ್ಳಾಪುರಕ್ಕೆ ವೈದ್ಯಕೀಯ ಕಾಲೇಜು ನೀಡಿದೆ. ಸುಧಾಕರ್ ಉತ್ತಮ ವ್ಯಕ್ತಿ, ಗೆದ್ದ ನಂತರ ಸಚಿವರಾಗುತ್ತಾರೆ. ಈಗಾಗಲೇ ಚಿಕ್ಕಬಳ್ಳಾಪುರಕ್ಕೆ 700 ಕೋಟಿ ರೂ. ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ ಎಂದು ಶ್ರೀರಾಮುಲು ಹೇಳಿದರು.

ಸುಧಾಕರ್ ಜೊತೆಗೆ ನಾನು ಹೆಗಲಿಗೆ ಹೆಗಲು ಕೊಟ್ಟು ಈ ಕ್ಷೇತ್ರದ ಅಭಿವೃದ್ಧಿಗೆ ದುಡಿತೀನಿ. ವಾಲ್ಮೀಕಿ ಸಮುದಾಯಕ್ಕೆ ಶೇ.7.5 ಮೀಸಲಾತಿ ಕಲ್ಪಿಸುವ ಸಂಬಂಧ ಈಗಾಗಲೇ ನ್ಯಾ.ನಾಗಮೋಹನ್ ದಾಸ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಸಮಿತಿಯ ವರದಿ ಕೈ ಸೇರಲಿದೆ ಎಂದು ಶ್ರೀರಾಮುಲು ಹೇಳಿದರು.

ತಳವಾರ ಪರಿವಾರ ಸಮುದಾಯವನ್ನು ಕೂಡ ಈಗಾಗಲೇ ಎಸ್ಟಿ ಸಮುದಾಯಕ್ಕೆ ಸೇರಿಸಲು ಸಿದ್ಧತೆ ನಡೆದಿದೆ. ಕೇಂದ್ರ ಸರಕಾರ ವಿಧೇಯಕಕ್ಕೆ ಅನುಮೋದನೆ ನೀಡಿದ ಕೂಡಲೇ ಅದು ಜಾರಿಗೆ ಬರಲಿದೆ. ಇವತ್ತು ಇಲ್ಲಿ ಸೇರಿರುವ ಜನಸಾಗರ ನೋಡಿದರೆ ಸುಧಾಕರ್ ಖಂಡಿತ ಗೆಲ್ಲುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಸಿ.ಟಿ.ರವಿ, ಶಾಸಕರಾದ ಶಾಸಕರಾದ ಆರಗ ಜ್ಞಾನೇಂದ್ರ, ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News